ರಾಜ್ಯದಲ್ಲಿ ಇನ್ನೂ ಹೆಚ್ಚಬಹುದು ಹಾನಿ ಪ್ರಮಾಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Aug 2018, 7:21 AM IST
900 crore Loss Due Karnataka Flood
Highlights

ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿ ಸಂಭವಿಸಿದ್ದು ಇದುವರೆಗೂ ಸಂಭವಿಸಿದ ಹಾನಿಯ ಮೊತ್ತ 900 ಕೋಟಿಯಷ್ಟಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಬಹುದು ಎಂದು ಅಂದಾಜು ಮಾಡಲಾಗಿದೆ. 

ಬೆಂಗಳೂರು :  ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಸುಮಾರು 900 ಕೋಟಿ ರು.ಗಿಂತ ಹೆಚ್ಚು ಸರ್ಕಾರಿ ಆಸ್ತಿ-ಪಾಸ್ತಿ ನಷ್ಟಸಂಭವಿಸಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಒಟ್ಟು 155.48 ಕಿ.ಮೀ. ರಾಜ್ಯ ಹೆದ್ದಾರಿ, 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾನಿಯಾಗಿದೆ. 538 ಸೇತುವೆಯಿಂದ 78.49 ಕೋಟಿ ರು., 34 ಸರ್ಕಾರಿ ಕಟ್ಟಡ ಹಾನಿಯಿಂದ 5.04 ಕೋಟಿ ರು. ನಷ್ಟವಾಗಿದೆ. ರಾಜ್ಯ ಹೆದ್ದಾರಿ ಹಾನಿಯಿಂದ 430 ಕೋಟಿ ರು., ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 365 ಕೋಟಿ ರು. ನಷ್ಟವಾಗಿದೆ. ಇದು ಸದ್ಯ ಲಭ್ಯವಿರುವ ಅಂಕಿ-ಅಂಶ. ಇನ್ನೂ ಅನೇಕ ಕಡೆಗಳಲ್ಲಿ ಹೋಗಲು ಆಗದಂತಹ ಗಂಭೀರ ಸ್ಥಿತಿ ಇದೆ. ಸರಿಯಾದ ಮಾಹಿತಿ ಲಭ್ಯವಾದ ನಂತರ ಇನ್ನೂ ಹೆಚ್ಚಾಗಲಿದೆ ಎಂದರು.

ದಕ್ಷಿಣ ವಲಯದಲ್ಲಿ ಬರುವ ಕೊಡಗು, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಕೋಲಾರ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾನಿಯಿಂದ ಸುಮಾರು 365 ಕೋಟಿ ರು. ನಷ್ಟವಾಗಿದೆ. ಉತ್ತರ ವಲಯದಲ್ಲಿ ಬರುವ ಕಾರವಾರ, ಧಾರವಾಡ, ಹಾವೇರಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ರಸ್ತೆ ಹಾನಿಯಿಂದ 63.83 ಕೋಟಿ ರು. ಹಾಗೂ ಈಶಾನ್ಯ ವಲಯದಲ್ಲಿ ಬರುವ ಕಲಬುರಗಿ, ಬೀದರ್‌, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 5.1 ಕೋಟಿ ರು. ನಷ್ಟವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಹೆದ್ದಾರಿಗಳ ಹಾನಿ ಇದರಲ್ಲಿ ಸೇರಿಲ್ಲ ಎಂದು ಅವರು ವಿವರಿಸಿದರು.

100 ಇಂಜಿನಿಯರ್‌ಗಳ ನಿಯೋಜನೆ:  ಮಳೆಯಿಂದ ತೀವ್ರ ಹಾನಿಯಾಗಿರುವ ಕೊಡಗಿನ ರಸ್ತೆ ರಿಪೇರಿಗೆ ಮೂರು ವಲಯಗಳ 100 ಇಂಜಿನಿಯರುಗಳನ್ನು ನಿಯೋಜನೆ ಮಾಡಲಾಗಿದೆ. ತಕ್ಷಣ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೂ ಸಹ ಕಾಮಗಾರಿಗಳ ಬಗ್ಗೆ ನಿತ್ಯ ನಿಗಾ ವಹಿಸುವಂತೆ ತಿಳಿಸಲಾಗಿದೆ ಎಂದರು.

ಶಿರಾಡಿಘಾಟ್‌ ರಸ್ತೆ ದುರಸ್ತಿಗೆ ಆರು ತಿಂಗಳು:  ಸದ್ಯದ ಸ್ಥಿತಿಯಲ್ಲಿ ಶಿರಾಡಿಘಾಟ್‌ ರಸ್ತೆ ದುರಸ್ತಿ ಮಾಡಿ ಮಾಮೂಲಿ ಸ್ಥಿತಿಗೆ ಬರಲು ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ. ಮಳೆಯಿಂದ ಭೂ ಕುಸಿತ ನಿರಂತರವಾಗಿ ನಡೆಯುತ್ತಿದೆ. ಸಂಪಾಜೆ ರಸ್ತೆ ಸಹ ಸಾಕಷ್ಟುಹಾನಿಯಾಗಿದೆ. ಹಗುರ ವಾಹನಗಳು ಸಂಚರಿಸಲು ಕನಿಷ್ಠ 15-20 ದಿನ ಬೇಕಾಗುತ್ತದೆ. ರಸ್ತೆ ಸುರಕ್ಷತೆ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧ ಪಟ್ಟವರು ಪ್ರಮಾಣ ಪತ್ರ ನೀಡುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುರಂಗ ಯೋಜನೆ ಜಾರಿಗೆ ಗಡ್ಕರಿ ಭೇಟಿಗೆ ಚಿಂತನೆ:  ಶಿರಾಡಿಘಾಟ್‌ ರಸ್ತೆ ಸಮಸ್ಯೆ ನಿವಾರಣೆಗೆ ಜಪಾನ್‌ ದೇಶದ ನೆರವಿನಿಂದ 10 ಸಾವಿರ ಕೋಟಿ ರು. ವೆಚ್ಚದ ಸುರಂಗ ಮಾರ್ಗದ ಯೋಜನೆ ಅನುಷ್ಠಾನ ಸಂಬಂಧ ಶೇ.75ರಷ್ಟುವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಯೋಜನೆ ಜಾರಿ ಸಂಬಂಧ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಜೊತೆ ಚರ್ಚಿಸಲು ಹಾಸನ ಸಂಸದರಾಗಿರುವ ಎಚ್‌.ಡಿ. ದೇವೇಗೌಡ ಹಾಗೂ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಕರೆದುಕೊಂಡು ಹೋಗಲು ಯೋಚಿಸಲಾಗಿದೆ ಎಂದು ಹೇಳಿದರು.

ರಸ್ತೆ ದುರಸ್ತಿಗೆ ಮಣ್ಣಿಲ್ಲ :  ಹಾಸನ, ಕೊಡಗುಗಳಲ್ಲಿ ಭೂ ಕುಸಿತದಿಂದ ಹಾಳಾಗಿರುವ ರಸ್ತೆ ರಿಪೇರಿ ಮಾಡಬೇಕಾದರೆ ರಸ್ತೆ ಬದಿಯನ್ನು ಮಣ್ಣಿನಿಂದ ಭರ್ತಿ ಮಾಡಿ, ಗೋಡೆ ಕಟ್ಟಬೇಕಾಗುತ್ತದೆ. ಕೊಡಗಿನ ರಸ್ತೆ ರಿಪೇರಿಗೆ ಮೈಸೂರು, ಪಿರಿಯಾಪಟ್ಟಣದಿಂದ ಮಣ್ಣು ತರುವಂತಹ ಪರಿಸ್ಥಿತಿ ಇದೆ. ಅನೇಕ ಕಡೆ ರಸ್ತೆ ಪಕ್ಕದಲ್ಲೇ ದೂರವಾಣಿ ತಂತಿ ಅಳವಡಿಕೆ ಸಂಬಂಧ ಆಳವಾಗಿ ಅಗೆಯಲಾಗಿದೆ. ಇದರಿಂದ ನೀರು ತುಂಬಿ ರಸ್ತೆ ಅಂಚುಗಳು ಕುಸಿದಿವೆ. ಇಂತಹ ರಸ್ತೆ ದುರಸ್ತಿ ಸಾಮಾನ್ಯ ಕೆಲಸವಲ್ಲ ಎಂದರು.

loader