ಲಕ್ನೋ[ಫೆ.08]: ಉತ್ತರ ಪ್ರದೇಶದಲ್ಲಿ ವಿಷಪೂರಿತ ಮದ್ಯ ಸೇವಿಸಿದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಸಹಾನ್ಪುರ್ ನಲ್ಲಿ ಹಾಗು ಖುಶೀನಗರದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಮದ್ಯ ಸೇವಿಸಿದ 48 ಗಂಟೆಗಳೊಳಗೆ ಇವರೆಲ್ಲರೂ ಮೃತಪಟ್ಟಿದ್ದಾರೆನ್ನಲಾಗಿದೆ.

ಈ ಘಟನೆ ಬೆಳಕಿಗೆ ಬಂದ ಬಳಿಕ ವಿಷಪೂರಿತ ಮದ್ಯ ತಯಾರಿಸುವವರ ನೆಟ್ವರ್ಕ್ ಪೂರ್ವ ಉತ್ತರ ಪ್ರದೆಶದಿಂದ ಪಶ್ಚಿಮ ಭಾಗಕ್ಕೆ ಹಬ್ಬಿಕೊಂಡಿದೆ ಎಂಬುವುದು ಸ್ಪಷ್ಟವಾಗಿದೆ. ಇನ್ನು ವಿಷಪೂರಿತ ಮದ್ಯ ತಯಾರಾಗುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ. ಯಾಕೆಂದರೆ ಈ ಮದ್ಯ ಅತ್ಯಂತ ಕೆಟ್ಟ ವಾಸನೆ ಹೊಂದಿದೆ. 

ಇನ್ನು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯದವ್ ಸರ್ಕಾರವಿದ್ದಾಗ ಇಲ್ಲಿನ ಉನ್ನಾವ್ ಹಾಗೂ ಲಕ್ನೋದಲ್ಲಿ ವಿಷಪೂರಿತ ಮದ್ಯ ಸೇವಿಸಿ 33 ಮಂದಿ ಮೃತಪಟ್ಟಿದ್ದರು. ಈ ವಿಚಾರ ವಿವದ ಸೃಷ್ಟಿಸುತ್ತಿದ್ದಂತೆಯೇ, ಮದ್ಯ ತಯಾರಾಗುತ್ತಿದ್ದ ಪ್ರದೇಶದಲ್ಲಿರುವ ಪೊಲೀಸ್ ಅಧಿಕಾರಿಗಳೇ ಇದಕ್ಕೆ ಹೊಣೆ ಎನ್ನಲಾಗಿತ್ತು. 

ಆದರೀಗ ಮತ್ತೆ ಸರ್ಕಾರ ಬದಲಾಗಿದೆ. ಹೀಗಿದ್ದರೂ ಇಂತಹ ಘೋರ ದುರಂತಗಳು ಸಂಭವಿಸುತ್ತಲೇ ಇವೆ. ಹೀಗಿರುವಾಗ ವಿಷಪೂರಿತ ಮದ್ಯ ತಯಾರಿಸುವ ಈ ನೆಟ್ವರ್ಕ್ ಇಲ್ಲಿನ ಆಡಳಿತ ಅಧಿಕಾರಿಗಳ ಕೃಪಾಕಟಾಕ್ಷವಿಲ್ಲದೇ ಕಾರ್ಯ ನಿರ್ವಹಿಸುವುದು ಅಸಾಧ್ಯ ಎಂಬುವುದು ಸ್ಪಷ್ಟ. 2018ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಕಾನ್ಪುರ ಮತ್ತು ದೇಹಾತ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 10 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಮದ್ಯದಂಗಡಿ ಮಾಲೀಕನ ವಿರುದ್ಧ ದೂರು ದಾಖಲಿಸಿ ಅಂಗಡಿ ಸೀಲ್ ಮಾಡಲಾಗಿತ್ತು. ಇದೇ ರೀತಿ 2018ರ ಜನವರಿಯಲ್ಲಿ ಬಾರಾಬಂಕಿಯಲ್ಲಿ ವಿಷಪೂರಿತ ಮದ್ಯ ಸೇವಿಸಿ 9 ಮಂದಿ ಮೃತಪಟ್ಟಿದ್ದರು ಎಂಬುವುದು ಗಮನಾರ್ಹ.