ಸೋನ್‌ಭದ್ರಾ/ಲಖನೌ [ಜು.18]: ಭೂ ವ್ಯಾಜ್ಯದ ಕುರಿತಾಗಿ ಆರಂಭವಾದ ಗಲಾಟೆ ಮೂವರು ಮಹಿಳೆಯರು ಸೇರಿದಂತೆ ಒಟ್ಟಾರೆ 9 ಮಂದಿಯ ಸಾವಿನಲ್ಲಿ ಅಂತ್ಯವಾದ ದುರಂತ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಅಲ್ಲದೆ, ಈ ದುರ್ಘಟನೆಯಲ್ಲಿ 19 ಮಂದಿ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದಿತ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಇಲ್ಲಿನ ಸೋನ್‌ಭದ್ರಾ ಜಿಲ್ಲೆಯ ಘೋರವಾಲ್‌ ಪಟ್ಟಣದಲ್ಲಿರುವ ಜಮೀನನ್ನು ಐಎಎಸ್‌ ಅಧಿಕಾರಿಯೊಬ್ಬರು ಸ್ಥಳೀಯ ಗ್ರಾಮ ಮುಖಂಡ ಯಜ್ಞದತ್‌ ಎನ್ನುವವರಿಗೆ ಮಾರಿದ್ದರು. ಆದರೆ ಜಮೀನಿನ ಕುರಿತು ಗ್ರಾಮಸ್ಥರ ಆಕ್ಷೇಪವಿತ್ತು. ಈ ನಡುವೆ ವಿವಾದಿತ ಜಮೀನನ್ನು ವಶಕ್ಕೆ ಪಡೆಯಲು ಯಜ್ಞದತ್‌ ಬುಧವಾರ 10-12 ಟ್ರಾಕ್ಟರ್‌ಗಳಲ್ಲಿ ತನ್ನ ಹಿಂಬಾಲಕರ ಜೊತೆಗೂಡಿ ಬಂದಿದ್ದರು. ಈ ವೇಳೆ ಗ್ರಾಮಸ್ಥರು ಮತ್ತು ಯಜ್ಞದತ್‌ ಬೆಂಬಲಿಗರ ನಡುವೆ ವಾಕ್ಸಮರ ನಡೆದಿತ್ತು.

ಈ ವೇಳೆ ಯಜ್ಞದತ್‌ನ ಬೆಂಬಲಿಗರು ಏಕಾಏಕಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ತುತ್ತಾದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡ 9 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಗ್ರಾಮದ ಮುಖ್ಯಸ್ಥ ಇಬ್ಬರು ಅಳಿಯಂದಿರಾದ ಗಿರಿಜೇಶ್‌ ಹಾಗೂ ವಿಮಲೇಶ್‌ ಎಂಬುವರನ್ನು ಬಂಧಿಸಿದ ಪೊಲೀಸರು, ತಲೆ ಮರೆಸಿಕೊಂಡ ಗ್ರಾಮದ ಮುಖ್ಯಸ್ಥ ಹಾಗೂ ಈ ಶೂಟೌಟ್‌ನಲ್ಲಿ ಭಾಗಿಯಾದವರ ದಸ್ತಗಿರಿಗಾಗಿ ಮನೆ-ಮನೆಯನ್ನು ಶೋಧಿಸುತ್ತಿದ್ದಾರೆ.

ರಾಜಕೀಯ ವಾಕ್ಸಮರ:

ಈ ಘಟನೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಂಡಿರುವ ವಿಪಕ್ಷಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದೆ. ಮತ್ತೊಂದೆಡೆ ಈ ಬಗ್ಗೆ ತನಿಖೆ ಕೈಗೊಂಡು ಗಲಭೆಗೆ ಕಾರಣವೇನು ಎಂಬುದರ ಬಗ್ಗೆ 24 ಗಂಟೆಯಲ್ಲಿ ಪತ್ತೆ ಹಚ್ಚುವಂತೆ ಮಿರ್ಜಾಪುರ ಆಯುಕ್ತ ಹಾಗೂ ವಾರಾಣಸಿ ವಲಯದ ಎಡಿಜಿಪಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಿರ್ದೇಶನ ನೀಡಿದ್ದಾರೆ.