ಬೆಂಗಳೂರು :  ಶಾಲೆ ಮುಗಿ​ಸಿ​ಕೊಂಡು ಜೆರಾಕ್ಸ್‌ ಮಾಡಿ​ಸಲು ತೆರ​ಳ​ಲು​ತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸೆ​ಗಿದ ಕಿಡಿಗೇಡಿಯೊಬ್ಬನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ನಿವಾಸಿ ನವೀನ್‌ ಕುಮಾರ್‌ ಬಂಧಿತನಾಗಿದ್ದು, ಶನಿವಾರ ಈ ಘಟನೆ ನಡೆ​ದಿದೆ. ಘಟ​ನೆಯ ನಂತರ ವಿದ್ಯಾ​ರ್ಥಿನಿ ಈ ವಿಚಾ​ರ​ವನ್ನು ತನ್ನ ಪೋಷ​ಕ​ರಿಗೆ ತಿಳಿ​ಸಿದ್ದು, ಅವರು ಚಂದ್ರಾಲೇಔಟ್‌ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಂಡ ನವೀನ್‌:

ಆರೋಪಿ ನವೀನ್‌ ಮೂಲತಃ ರಾಯ​ಚೂರು ಜಿಲ್ಲೆ ದೇವದುರ್ಗ ತಾಲೂಕಿನವನಾಗಿದ್ದು, ಹಲವು ದಿನಗಳಿಂದ ತನ್ನ ಅಜ್ಜಿ ಜತೆ ಬನಶಂಕರಿಯಲ್ಲಿ ನೆಲೆಸಿದ್ದ. ಚಂದ್ರಾಲೇಔಟ್‌ಗೆ ಆಗಾಗ್ಗೆ ತನ್ನ ಗೆಳೆಯರ ಭೇಟಿಗೆ ಬರುತ್ತಿದ್ದ ಆತ, ಅಲ್ಲಿನ ರಸ್ತೆ ಬದಿ ಮಹಿಳಾ ವ್ಯಾಪಾರಿಗಳಿಗೆ ಚಾಕು ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ. ಹಾಗೆ ಯುವತಿಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಆದರೆ ಇದುವರೆಗೆ ಈ ಪುಂಡಾಟಿಕೆ ಕೃತ್ಯಗಳ ಬಗ್ಗೆ ಆತನ ವಿರುದ್ಧ ಯಾರೊಬ್ಬರು ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

‘ಕೆಲ ದಿನಗಳಿಂದ ನನ್ನನ್ನು ನವೀನ್‌ ಬೆನ್ನು ಹತ್ತಿದ್ದ. ನಾನು ಶಾಲೆಗೆ ಹೋಗುವಾಗ ಹಿಂದೆ ಬಂದು ಚುಡಾಯಿಸುತ್ತಿದ್ದ. ಈ ವಿಚಾರವನ್ನು ನನ್ನ ತಾಯಿಗೆ ಹೇಳಿದ್ದೆ. ಆಗ ಶಾಲೆ ಬಳಿ ಬಂದು ಆತನಿಗೆ ಪೋಷಕರು ಬೈದಿದ್ದರು. ಈ ಘಟನೆ ಬಳಿಕ ಕಣ್ಮರೆಯಾಗಿದ್ದ ಆತ ಮತ್ತೆ ಶನಿವಾರವೇ ಕಾಣಿಸಿಕೊಂಡಿದ್ದು’ ಎಂದು ಸಂತ್ರಸ್ತೆ ವಿಚಾರಣೆ ವೇಳೆ ಹೇಳಿರುವುದಾಗಿ ಗೊತ್ತಾಗಿದೆ.

‘ಶಾಲೆಯಲ್ಲಿ ಆಂತರಿಕ ಪರೀಕ್ಷೆಗೆ ತಯಾರಾಗಲು ನೋಟ್ಸ್‌ ಬೇಕಿತ್ತು. ಹಾಗಾಗಿ ಮಧ್ಯಾಹ್ನ 2ರ ಸುಮಾರಿಗೆ ನಾನೊಬ್ಬಳೆ ಜೆರಾಕ್ಸ್‌ ಅಂಗಡಿಗೆ ಹೋಗುತ್ತಿದ್ದೆ. ಆಗ ಎದುರಾದ ಆತ, ನಿನ್ನ ಜೊತೆ ಮಾತನಾಡಬೇಕು ಎಂದು ಕೈಹಿಡಿದು ಬಲವಂತವಾಗಿ ಎಳೆದೊಯ್ದ. ರಸ್ತೆ ಬದಿ ಯಾವುದೋ ಶೆಡ್‌ಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿದ. ಆಗ ನಾನು ಹೇಳಿದಂತೆ ನೀನು ಕೇಳದಿದ್ದರೆ ನಿನ್ನ ತಮ್ಮ ಹಾಗೂ ತಾಯಿಯನ್ನು ಕೊಲ್ಲುತ್ತೇನೆ ಎಂದು ಬೆದರಿಸಿದ. ಇದರಿಂದ ಭಯಗೊಂಡು ನಾನು ಕೂಗಿದಾಗ ಸ್ಥಳೀಯರು ರಕ್ಷಿಸಿದರು’ ಎಂದು ಸಂತ್ರಸ್ತೆ ವಿವರಿಸಿದ್ದಾಳೆ.

ಬಾಲಕಿ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸಾರ್ವಜನಿಕರು, ನವೀನ್‌ನ್ನು ಹಿಡಿದು ಗೂಸ ಕೊಟ್ಟಿದ್ದಾರೆ. ಕೊನೆಗೆ ಜನರಿಂದ ತಪ್ಪಿಸಿಕೊಂಡ ಆತ, ಕಲ್ಲೆತ್ತಿಕೊಂಡು ಹೊಡೆಯುವುದಾಗಿ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದ. ನಂತರ ಮನೆಗೆ ತೆÜರಳಿದ ಬಾಲಕಿ, ತಾಯಿ ಬಳಿ ಘಟನೆ ಕುರಿತು ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಕೊನೆಗೆ ಪೋಷಕರೊಂದಿಗೆ ಠಾಣೆಗೆ ದೂರು ನೀಡಿದಳು. ತನಿಖೆ ಕೈಗೆತ್ತಿಕೊಂಡು ಆರೋಪಿಯ ಸ್ನೇಹಿತರನ್ನು ಪತ್ತೆ ಹಚ್ಚಿ ಅವರ ಮೂಲಕ ನವೀನ್‌ನನ್ನುಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.