Asianet Suvarna News Asianet Suvarna News

86 ತಾಲೂಕು ಬರಪೀಡಿತ ಪಟ್ಟಿಗೆ

ರಾಜ್ಯದ 86ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ.  ಬರಪೀಡಿತ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ.

85 Taluks Face Drought Situations
Author
Bengaluru, First Published Sep 12, 2018, 8:07 AM IST

ಬೆಂಗಳೂರು : ಮಳೆಯ ಕೊರತೆ ಕಂಡುಬಂದಿರುವ ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳನ್ನು ಕೇಂದ್ರದ ಮಾರ್ಗಸೂಚಿಯಂತೆ ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ 86 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಆರ್‌.ವಿ.ದೇಶಪಾಂಡೆ, ಮಳೆ ಅಭಾವದಿಂದ ಎಂಟು ಕೋಟಿ ರು. ಬೆಳೆ ನಷ್ಟವಾಗಿದ್ದು, ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಕಾರ್ಯಪಡೆಯೊಂದನ್ನು ರಚಿಸಿ ಪ್ರತಿ ತಾಲೂಕಿಗೆ 50 ಲಕ್ಷ ರು.ನಂತೆ 43 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಜೊತೆಗೆ ಈ ತಾಲೂಕುಗಳಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಪಶುಸಂಗೋಪನೆ ಇಲಾಖೆಗೆ 15 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಹೊಸದಾಗಿ 50 ತಾಲೂಕುಗಳನ್ನು ರಚನೆ ಮಾಡಲಾಗಿದ್ದರೂ ಹಳೆಯ ತಾಲೂಕುಗಳ ಆಧಾರದ ಮೇಲೆ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ 23 ಜಿಲ್ಲೆಗಳ 86 ತಾಲೂಕುಗಳು ಸೇರಿವೆ ಎಂದು ತಿಳಿಸಿದರು.

ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ರೇಷ್ಮೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣವನ್ನು ಅಂದಾಜಿಸಲಿವೆ. ಸಮೀಕ್ಷೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದ್ದರೆ ತೀವ್ರ ಬರಪೀಡಿತ ತಾಲೂಕುಗಳು ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಒಂದು ಪ್ರದೇಶದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿರ್ಧರಿಸಲು ವಾಡಿಕೆಯ ಕನಿಷ್ಠ ಶೇ.60ಕ್ಕಿಂತ ಕಡಿಮೆ ಮಳೆ, ಸತತ ಮೂರು ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶುಷ್ಕ ವಾತಾವರಣ, ಕೃಷಿ ಬೆಳೆಯ ವಾಡಿಕೆಯ ಶೇ.75ಕ್ಕಿಂತ ಕಡಿಮೆ ಬಿತ್ತನೆ, ಉಪಗ್ರಹ ಆಧಾರಿತ ಬೆಳೆ ವಿಶ್ಲೇಷಣೆ ಶೇ.50ಕ್ಕಿಂತ ತೇವಾಂಶದ ಕೊರತೆ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೇ.30ಕ್ಕೆ ರಾಜ್ಯವನ್ನು ಪ್ರವೇಶಿಸಿದ ಮುಂಗಾರು ಮಳೆಯು ಜೂ.8ರ ಹೊತ್ತಿಗೆ ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿತು. ಆದರೆ, ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಯಲ್ಲಿ ಮಾತ್ರ ಅಧಿಕ ಮಳೆಯಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಬರದ ಕರಾಳ ಛಾಯೆ ಕಾಣಿಸಿಕೊಂಡಿದೆ. ಸೆಪ್ಟೆಂಬರ್‌ ತಿಂಗಳಲ್ಲಿಯೂ ಮಳೆಯ ಕೊರತೆ ಮುಂದುವರಿದಿದೆ. ಮಳೆಯ ಬರುವ ಮುನ್ಸೂಚನೆಗಳು ಸಹ ಇಲ್ಲವಾಗಿದೆ. ಹೀಗಾಗಿ ಕುಡಿಯುವ ನೀರು, ಜಾನುವಾರುಗಳ ಮೇವಿನ ಆದ್ಯತೆ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಳೆಯ ಕೊರತೆಯಿಂದಾಗಿ ರಾಜ್ಯ 15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, 62.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. 15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಿದ ಬೆಳೆ ಒಣಗುತ್ತಿದೆ ಎಂದು ವಿವರಿಸಿದರು.

 

ಯಾವ್ಯಾವ ತಾಲೂಕು ಬರಪೀಡಿತ?

ಬೆಂಗಳೂರು ಗ್ರಾಮಾಂತರ- ಹೊಸಕೋಟೆ

ರಾಮನಗರ- ಚನ್ನಪಟ್ಟಣ, ಕನಕಪುರ

ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶೀನಿವಾಸಪುರ

ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ

ತುಮಕೂರು- ಸಿ.ಎನ್‌.ಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುಮಕೂರು

ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು

ದಾವಣಗೆರೆ- ಹರಪನಹಳ್ಳಿ, ಹರಿಹರ

ಚಾಮರಾಜನಗರ - ಕೊಳ್ಳೇಗಾಲ, ಯಳಂದೂರು

ಮಂಡ್ಯ- ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ

ಬಳ್ಳಾರಿ- ಬಳ್ಳಾರಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರಗುಪ್ಪ

ಕೊಪ್ಪಳ- ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗ

ರಾಯಚೂರು- ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು, ಸಿಂಧನೂರು

ಕಲಬುರಗಿ- ಅಫ್ಜಲಪುರ, ಚಿಂಚೋಳಿ, ಚಿತ್ತಾಪುರ, ಕಲಬುರಗಿ, ಜೇವರ್ಗಿ, ಸೇಡಂ

ಯಾದಗಿರಿ- ಶಹಾಪೂರ, ಸುರಪುರ, ಯಾದಗಿರಿ

ಬೀದರ್‌- ಬೀದರ್‌, ಹುಮ್ನಾಬಾದ್‌

ಬೆಳಗಾವಿ- ರಾಮದುರ್ಗ, ಸವದತ್ತಿ

ಬಾಗಲಕೋಟೆ- ಬಾದಾಮಿ, ಬಾಗಲಕೋಟೆ, ಹುನಗುಂದ, ಜಮಖಂಡಿ

ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ, ಸಿಂಧಗಿ

ಗದಗ- ಗದಗ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ

ಹಾವೇರಿ- ರಾಣೆಬೆನ್ನೂರು

ಧಾರವಾಡ- ಹುಬ್ಬಳ್ಳಿ, ನವಲಗುಂದ

ಹಾಸನ- ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ

ಚಿಕ್ಕಮಗಳೂರು- ಕಡೂರು

Follow Us:
Download App:
  • android
  • ios