ಮೃತ ಎಂಟು ಮಂದಿ ಭದ್ರತಾ ಸಿಬ್ಬಂದಿಯಲ್ಲಿ ನಾಲ್ವರು ಸಿಆರ್‌ಪಿಎಫ್‌ಗೆ ಸೇರಿದವರಾಗಿದ್ದು, ಒಬ್ಬರು ಜಮ್ಮು-ಕಾಶ್ಮೀರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಉಳಿದ ಮೂವರು ರಾಜ್ಯ ಪೊಲೀಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಗಳು.
ಶ್ರೀನಗರ(ಆ.26): ದಕ್ಷಿಣ ಕಾಶ್ಮೀರದ ಪುಲ್ವಾಮದ ಜಿಲ್ಲಾ ಪೊಲೀಸ್ ವಸತಿ ಸಂಕೀರ್ಣಕ್ಕೆ ನುಗ್ಗಿದ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭ ನಡೆದ ಪರಸ್ಪರ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಿಆರ್ಪಿಎಫ್ ಸಿಬ್ಬಂದಿ ಸೇರಿದಂತೆ, ಎಂಟು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಪೊಲೀಸ್ ಕಟ್ಟಡದೊಳಗೆ ನುಗ್ಗಿದ ಉಗ್ರರನ್ನು ತೆರವುಗೊಳಿಸಲು ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕಟ್ಟಡದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಕಾಪಾಡಿ ಹೊರತಂದರು.
ಮೂವರು ದಾಳಿಕೋರರೂ ಹತರಾದ ಬಳಿಕ, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ವಸತಿ ಸಂಕೀರ್ಣದ ಮೂರು ಕಟ್ಟಡದೊಳಗೆ ಉಗ್ರರು ಸ್ವಯಂ ಪ್ರೇರಿತರಾಗಿ ನುಗ್ಗಿದ್ದರು. ಅಲ್ಲಿಂದ ಅವರು ಯದ್ವಾತದ್ವಾ ಗುಂಡಿನ ದಾಳಿ ಆರಂಭಿಸಿದ್ದರು. ಇದೊಂದು ಉಗ್ರರ ಆತ್ಮಹತ್ಯಾ ದಾಳಿ ಎಂದು ಶ್ರೀನಗರದ ವಿಎಕ್ಸ್ ತುಕಡಿಯ ಕಮಾಂಡಿಂಗ್ ಅಧಿಕಾರಿ ಲೆ.ಜ. ಜೆ.ಎಸ್. ಸಂಧು ತಿಳಿಸಿದ್ದಾರೆ.
ಮೃತ ಎಂಟು ಮಂದಿ ಭದ್ರತಾ ಸಿಬ್ಬಂದಿಯಲ್ಲಿ ನಾಲ್ವರು ಸಿಆರ್ಪಿಎಫ್ಗೆ ಸೇರಿದವರಾಗಿದ್ದು, ಒಬ್ಬರು ಜಮ್ಮು-ಕಾಶ್ಮೀರ ಪೊಲೀಸ್ ಕಾನ್ಸ್ಟೇಬಲ್ ಮತ್ತು ಉಳಿದ ಮೂವರು ರಾಜ್ಯ ಪೊಲೀಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಗಳು. ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ಕಾರ್ಯಾಚರಣೆಯ ಅಂತಿಮ ಘಟ್ಟದಲ್ಲಿ, ಉಗ್ರರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಉಪಕರಣಗಳನ್ನು ನಿಷ್ಕ್ರಿಯಗೊಳಿಸುವಾಗ ಹತರಾಗಿದ್ದಾರೆ.
‘ಭದ್ರತಾ ಪಡೆಗಳಿಗೆ ಇದೊಂದು ಬೇಸರದ ದಿನ. ನಮ್ಮ ಸಿಬ್ಬಂದಿ ಧೈರ್ಯಶಾಲಿಗಳಾಗಿ ಹೋರಾಡಿದ್ದಾರೆ. ಇಡೀ ರಾಜ್ಯದಿಂದ ಉಗ್ರವಾದವನ್ನು ಕಿತ್ತೆಸೆಯುವುದಕ್ಕೆ ನಾವು ಇನ್ನೂ ಹೆಚ್ಚು ದೃಢ ಸಂಕಲ್ಪ ಹೊಂದಿದ್ದೇವೆ’ ಎಂದು ಜಮ್ಮು-ಕಾಶ್ಮೀರ ಡಿಜಿಪಿ ಎಸ್.ಪಿ. ವೈದ್ ಹೇಳಿದ್ದಾರೆ. ಘಟನೆಯ ಬಳಿಕ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ರದ್ದುಪಡಿಸಲಾಗಿದೆ.
