ಮಥುರಾ (ಉತ್ತರಪ್ರದೇಶ), (ಜೂ. 16):  ಮಥುರಾ ಸಮೀಪದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ  ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. 

ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಹೆಣ್ಣು ಮಗು ಎಂದು ತಿಳಿದುಬಂದಿದ್ದು, ಅನಿತಾ, ನೀರಜ್, ಅಂಜಲಿ, ಶಾಲು, ತರುಣ, ವಿಷ್ಣು, ಗಬ್ಬರ್ ಹಾಗೂ ಸಂತೋಷಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ಭಾನುವಾರ ಬೆಳಗ್ಗೆ ಇವರೆಲ್ಲ ಆಗ್ರಾದ ತಾಜ್ ಮಹಲ್ ಗೆ ತೆರಳುತ್ತಿದ್ದರು. ಈ ವೇಳೆ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬಲ್ ದೇವ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಚಲಿಸುತ್ತಿದ್ದ ಟ್ರಕ್ ಗೆ ಗುದ್ದಿದ್ದ ಕಾರಿನ ಮುಂಭಾಗ ಪೂರ್ತಿ ನಜ್ಜುಗುಜ್ಜಾಗಿದೆ ಎಂದು ಗ್ರಾಮಾಂತರ ಎಸ್ಪಿ ಆದಿತ್ಯ ಶುಕ್ಲಾ ತಿಳಿಸಿದ್ದಾರೆ.