ಝಜ್ಜರ್(ಡಿ.24): ಉತ್ತರ ಭಾರತದಲ್ಲಿ ಚಳಿಯಹೊಡೆತಕ್ಕೆ ಜನಜೀವನ ತತ್ತರಿಸಿದೆ. ಈ ಮಧ್ಯೆ ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಪರಿಣಾಮ, ರಸ್ತೆ ಮೇಲೆ ತೀವ್ರ ಮಂಜು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿ 8 ಜನ ಸಾವನ್ನಪ್ಪಿದ್ದಾರೆ.

ಹರಿಯಾಣದ ಝಜ್ಜರ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಮಂಜು ಕವಿದಿದ್ದರಿಂದ ರಸ್ತೆ ಮೇಲಿದ್ದ ವಾಹನಗಳು ಕಾಣುತ್ತಿರಲಿಲ್ಲ. ಪರಿಣಾಮ ಬೃಹತ್ ಟ್ರಕ್ ವೊಂದು ತನ್ನ ಮುಂದಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಸುಮಾರು 10ಕ್ಕೂ ಹೆಚ್ಚು ವಾಹನಗಳು ಈ ಅಪಘಾತದಲ್ಲಿ ಜಖಂಗೊಂಡಿದ್ದು, ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರಕ್ ಮುಂದಿದ್ದ ಜೀಪ್ ನಲ್ಲಿ ಸಂಚರಿಸುತ್ತಿದ್ದ ಸುಮಾರು 5ಕ್ಕೂ ಹೆಚ್ಚು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ನು ಝಜ್ಜರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.