ಮಹದಾಯಿಗಾಗಿ ನಡೆದಿದೆ ಬರೋಬ್ಬರಿ 75 ಬಾರಿ ಬಂದ್!

75 Times Mahdayi Bund
Highlights

ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ರೈತರು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 5 ಬಾರಿ ಕರ್ನಾಟಕ ಬಂದ್, 25 ಸಲ ನರಗುಂದ, 50 ಸಲ ನವಲಗುಂದ  ಬಂದ್ ಮಾಡಿ ಹಕ್ಕೊತ್ತಾಯ ಮಂಡಿಸಿದರೂ ಫಲಿತಾಂಶ ಶೂನ್ಯವಾಗಿದ್ದು, ಈಗ ಮತ್ತೊಂದು ಬಂದ್‌ಗೆ ಸಜ್ಜಾಗಿದ್ದಾರೆ.

ಬೆಂಗಳೂರು (ಜ.24): ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ರೈತರು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 5 ಬಾರಿ ಕರ್ನಾಟಕ ಬಂದ್, 25 ಸಲ ನರಗುಂದ, 50 ಸಲ ನವಲಗುಂದ  ಬಂದ್ ಮಾಡಿ ಹಕ್ಕೊತ್ತಾಯ ಮಂಡಿಸಿದರೂ ಫಲಿತಾಂಶ ಶೂನ್ಯವಾಗಿದ್ದು, ಈಗ ಮತ್ತೊಂದು ಬಂದ್‌ಗೆ ಸಜ್ಜಾಗಿದ್ದಾರೆ.

ಕಳೆದ ನಾಲ್ಕು ದಶಕದ ಹೋರಾಟ ಇದಾಗಿದ್ದರೂ ಇದು ತೀವ್ರಗೊಂಡದ್ದು ಇತ್ತೀಚಿನ ವರ್ಷಗಳಲ್ಲಿ. ಮನವಿ, ಮುತ್ತಿಗೆ, ಪಾದಯಾತ್ರೆ, ಧರಣಿಗೆ ಸೀಮಿತವಾಗಿದ್ದ ಹೋರಾಟ ನಿರಂತರ ಸತ್ಯಾಗ್ರಹ, ಬಂದ್, ಸರ್ವಪಕ್ಷ ಸಭೆ, ಪ್ರಧಾನಿ ಬಳಿ ನಿಯೋಗ ಇತ್ಯಾದಿಗಳು ಚುರುಕಾಗಿದ್ದು ಕಳೆದ ಎರಡೂವರೆ ವರ್ಷಗಳಿಂದ.

ಬಂಡಾಯದ ನೆಲವಾದ ನರಗುಂದದಲ್ಲಿ 2015 ರ ಜು.15ರಿಂದ ನಿರಂತರ ಹೋರಾಟ ಆರಂಭಗೊಂಡು ಇದೀಗ 925ನೇ ದಿನಕ್ಕೆ ಕಾಲಿಟ್ಟಿದೆ. ಒಂಬತ್ತು ದಿನಗಳ ಬಳಿಕ (2015ರ  ಜು.24) ನವಲಗುಂದದಲ್ಲಿ ಹೋರಾಟ ಆರಂಭವಾಗಿ ಅದೀಗ 916ನೇ ದಿನಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಹೋರಾಟಗಾರರು ಎದುರಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ, ಮಹದಾಯಿಗೆ ಒಪ್ಪಿಗೆ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ.

ಪೊಲೀಸರ ಹೀನ ದೌರ್ಜನ್ಯ: ನರಗುಂದದಲ್ಲಿ ಬರೋಬ್ಬರಿ 25 ಸಲ ಬಂದ್ ನಡೆದರೆ, ನವಲಗುಂದದಲ್ಲಿ ಈ ಬಂದ್ ಹಾಫ್ ಸೆಂಚುರಿ ಗಡಿದಾಟಿದೆ. ಇನ್ನು ಕರ್ನಾಟಕದಲ್ಲಿ 5 ಸಲ ಬಂದ್ ನಡೆಸಲಾಗಿದೆ. ಇದಲ್ಲದೇ, ಎರಡು ಬಾರಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 2 ಬಾರಿ ಬಂದ್ ಆಚರಿಸಲಾಗಿದೆ.

ಮಹದಾಯಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು, ಸಿನಿಮಾರಂಗ, ಸಾಹಿತಿಗಳು, ಶಿಕ್ಷಕರು ಸೇರಿದಂತೆ ಎಲ್ಲರೂ ಕೈ ಜೋಡಿಸಿವೆ. ಪ್ರತಿಬಾರಿಯೂ ಬಂದ್‌ಗೆ ಸಾರ್ವಜನಿಕ ಸಂಘಟನೆಗಳು, ವ್ಯಾಪಾರಸ್ಥರು ಎಲ್ಲರೂ ಬೆಂಬಲಿಸಿದ್ದರಿಂದ ಅತ್ಯುತ್ತಮ ಪ್ರತಿಕ್ರಿಯೆಯೆ ವ್ಯಕ್ತವಾಗಿದ್ದು ವಿಶೇಷ. 

ಇನ್ನು 2016ರ ಜುಲೈ 27ರಂದು ನ್ಯಾಯಾಧಿಕರಣ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದ ವೇಳೆಯಂತೂ ಇಲ್ಲಿನ ಹೋರಾಟ ಹಿಂಸಾರೂಪಕ್ಕೂ ತಾಳಿದ್ದುಂಟು. ಸರ್ಕಾರಿ ಕಚೇರಿಗಳನ್ನು ಧ್ವಂಸಗೊಳಿಸಿದ ಘಟನೆಗಳು ನಡೆದಿವೆ. ಅಕ್ಷರಶಃ ನರಗುಂದ ಮತ್ತು ನವಲಗುಂದಗಳೆರಡು ಆ ಮೂರು ದಿನಗಳ ಕಾಲ ಹೊತ್ತು ಉರಿದಿವೆ. ಆಗ ಮನೆ ಮನೆಗಳಿಗೆ ನುಗ್ಗಿ ಅಮಾಯಕರು, ಮಹಿಳೆಯರ ಮೇಲೂ ಪೊಲೀಸರು ದೌರ್ಜನ್ಯ ನಡೆಸಿದ್ದುಂಟು. ಇದಕ್ಕೆ ಹೈಕೋರ್ಟ್ ಸರ್ಕಾರ ತಪರಾಕಿ ಕೂಡ ಹಾಕಿತ್ತು. ಸುಮಾರು 200 ಜನರ ಮೇಲೆ ಕೇಸ್ ದಾಖಲಾಗಿತ್ತು. ಆದರೆ ಇತ್ತೀಚಿಗೆ ಸರ್ಕಾರ ಆ ಕೇಸುಗಳನ್ನು ವಾಪಸ್ ಪಡೆದಿದೆ.

ಬಿಜೆಪಿ ಅಪಸ್ವರ, ಆರೋಪ: ವಿವಿಧ ರೀತಿಯ ಹೋರಾಟ, ಬಂದ್ ಮಾಡಿದಾಗ್ಯೂ ಯಾವುದೇ ರಾಜಕೀಯ ಪಕ್ಷಗಳು ಅಪಸ್ವರ ಎತ್ತಿರಲಿಲ್ಲ. ಬದಲಾಗಿ ಜೆಡಿಎಸ್ ನೇರವಾಗಿ ರೈತರ ಈ ಹೋರಾಟ ಬೆಂಬಲಿಸುತ್ತ ಬಂದಿದ್ದರೆ, ಕಾಂಗ್ರೆಸ್-ಬಿಜೆಪಿ ತಟಸ್ಥ ನಿಲುವು ತಾಳುತ್ತಿದ್ದವು. ಆದರೆ, ಇದೇ ಜ.25 ಮತ್ತು ಫೆ.4 ರಂದು ಬಂದ್ ಮಾಡಲು ವಿವಿಧ ಸಂಘಟನೆಗಳು ನೀಡಿರುವ ಕರೆಯನ್ನು ಬಿಜೆಪಿ ವಿರೋಧಿಸಿದೆ.

ಅಲ್ಲದೇ ಇದು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಬಂದ್ ಎಂದು ಆರೋಪಿಸಿರುವುದು ರೈತರನ್ನು ಇನ್ನಷ್ಟು ಕೆರಳಿಸಿದೆ. ನಮ್ಮದು ರಾಜಕೀಯ ಪ್ರೇರಿತ ಹೋರಾಟವಲ್ಲ, ಹೋರಾಟ ನಮ್ಮ ಅಸ್ತ್ರ ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೈತರು ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬಿಜೆಪಿಗೆ ಕಲ್ಲು-ಮುಳ್ಳಿನ ಹಾದಿಯಾಗುವ ಸಾಧ್ಯತೆಯಿದೆ.

ಪ್ರಧಾನಿಗೆ ಏಕೆ ನೆನಪಾಗುತ್ತಿಲ್ಲ:  ಪಾಲಿಕೆಯಲ್ಲಿ ಸ್ವಚ್ಛತೆ ಇಲ್ಲ ಎಂದು ಪತ್ರ ಬರೆದವರಿಗೆ, ಶೌಚಾಲಯ ಬೇಕೆಂದು ಒಂದೆರಡು ದಿನ ಉಪವಾಸ ಕುಳಿತ ವಿದ್ಯಾರ್ಥಿನಿ ಬಗ್ಗೆ ಪ್ರಧಾನಿ ಸ್ಪಂದಿಸುತ್ತಾರೆ. ಆದರೆ ನಾವು ಹತ್ತಾರು ಬಾರಿ ಬಂದ್ ಮಾಡಿದ್ದೇವೆ. ನಿರಂತರ ಧರಣಿ ನಡೆಸುತ್ತಿದ್ದೇವೆ. ಆದರೂ ನಮ್ಮ ಹೋರಾಟಕ್ಕೇಕೆ ಸ್ಪಂದಿಸುತ್ತಿಲ್ಲ. ಶೌಚಾಲಯದ ಬೇಡಿಕೆಗಿಂತಲೂ ನಮ್ಮ ಬೇಡಿಕೆ ಕನಿಷ್ಠವೇ? ನದಿ ಜೋಡಣೆ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವ ಕೇಂದ್ರ ಸರ್ಕಾರಕ್ಕೆ ಮಹದಾಯಿ ಮಲಪ್ರಭ ನದಿ ಸಮಸ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ? ಎಂದು ಪ್ರಶ್ನಿಸುವ ಹೋರಾಟಗಾರರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಈ ವಿಷಯದಲ್ಲಿ ಬರೀ ರಾಜಕಾರಣವನ್ನೇ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಯಾರಾದರೂ ಪ್ರಮುಖರು ಬಂದರೆ ಬಂದ್, ಧರಣಿ, ಮುತ್ತಿಗೆ ಹಾಕುವುದು ಹೋರಾಟಗಾರರ ಅಸ್ತ್ರ. ಇವೆಲ್ಲವನ್ನು ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಯಾವ ತರಹದ ಹೋರಾಟ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂಬ ಪ್ರಶ್ನೆ ಹೋರಾಟಗಾರರನ್ನು ಕಾಡುತ್ತಿದೆ.

ಕರ್ನಾಟಕದಲ್ಲಿ 5 ಸಲ, ನವಲಗುಂದದಲ್ಲಿ 50 ಸಲ ಬಂದ್ ಮಾಡಿದ್ದೇವೆ. ಎಲ್ಲ ವೇಳೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ 3 ಪಕ್ಷಗಳು ಒಂದಾಗುತ್ತಿಲ್ಲ. ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಬಗ್ಗೆ ಪ್ರಧಾನಿ ಸ್ಪಂದಿಸುತ್ತಾರೆ. ಆದರೆ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಏಕೆ? ಏನೇ ಆಗಲಿ ನೀರು ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು.

 ಲೋಕನಾಥ ಹೆಬಸೂರು, ನವಲಗುಂದ ಹೋರಾಟಗಾರ

 

ನಮ್ಮ ಹೋರಾಟವನ್ನೇ ರಾಜಕೀಕರಣಗೊಳಿಸುತ್ತಿದ್ದಾರೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತ್ಯಾರೋಪ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ನೀರು ದೊರೆಯುವವರೆಗೂ ಹೋರಾಟ, ಬಂದ್ ಮಾಡುತ್ತಲೇ ಇರುತ್ತೇವೆ.

 ಶರಣಪ್ಪಗೌಡ ಪಾಟೀಲ, ನರಗುಂದ ಹೋರಾಟಗಾರ

loader