ಕೊಪ್ಪಳದಲ್ಲಿ ಕೂದಲು ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಶ್ರೀನಿವಾಸ ಗುಪ್ತಾ ಅವರಿಗೆ ಸೇರಿದ ಸಂಸ್ಥೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು 65 ಕೋಟಿ ರು. ಅಘೋಷಿತ ಆದಾಯ ಪತ್ತೆ ಹಚ್ಚಿ, ಐದು ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು (ಜ.3): ಕೊಪ್ಪಳದಲ್ಲಿ ಕೂದಲು ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಶ್ರೀನಿವಾಸ ಗುಪ್ತಾ ಅವರಿಗೆ ಸೇರಿದ ಸಂಸ್ಥೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು 65 ಕೋಟಿ ರು. ಅಘೋಷಿತ ಆದಾಯ ಪತ್ತೆ ಹಚ್ಚಿ, ಐದು ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ದೇವಾಲಯ ಮತ್ತು ಬ್ಯೂಟಿ ಪಾರ್ಲರ್‌ಗಳಿಂದ ಖರೀದಿಸಿದ ಕೂದಲುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದ ಉದ್ಯಮಿ ಶ್ರೀನಿವಾಸ ಗುಪ್ತಾ ಅವರು ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದು ಇತ್ತೀಚೆಗೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ 65 ಕೋಟಿ ರು. ಅಘೋಷಿತ ಆದಾಯ ಪತ್ತೆಯಾಗಿದೆ. ಅಲ್ಲದೇ, ದಾಖಲೆಗಳಿಲ್ಲದ 2.5 ಕೋಟಿ ರು. ಮೌಲ್ಯದ ಚಿನ್ನಾಭರಣ, 2.5 ಕೋಟಿ ರು. ನಗದು ಮತ್ತು 140 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 

ಹೈದರಾಬಾದ್‌ನ ವೇಲೂರಿನಲ್ಲಿ ಕೂದಲು ಸಂಸ್ಕರಣ ಘಟಕ ಹೊಂದಿದ್ದು, ಕೊಪ್ಪಳದ ಭಾಗ್ಯನಗರದ ಘಟಕದ ಮೂಲಕ ಆಫ್ರಿಕಾ ಮತ್ತು ಯೂರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆಫ್ರಿಕಾ ದೇಶದಲ್ಲಿ ಒಣ ಕೂದಲಿಗೆ ಭಾರೀ ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಒಣಕೂದಲು ಹೆಚ್ಚಾಗಿ ಮಾರಾಟವಾಗುತ್ತದೆ. ಅಲ್ಲದೇ, ವಿಗ್ ತಯಾರಿಕೆ ಸೇರಿದಂತೆ ಇತರೆ ಉತ್ಪನ್ನಗಳಿಗಾಗಿ ಕೂದಲನ್ನು ಬಳಕೆ ಮಾಡಲಾಗುತ್ತದೆ. 2015 ರಲ್ಲಿ ಈ ವ್ಯವಹಾರವು 600 ಕೋಟಿ ರು. ನಡೆದಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.