ನವದೆಹಲಿ[ಡಿ.12]: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದೊಂದಿಗೆ ಭಾರತದ ಆಡಳಿತ ನಕ್ಷೆಯ ಚಿತ್ರಣ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಕ್ರಮವಾಗಿ ನಮ್ಮ ದೇಶದ ಮೊದಲನೇ ಹಾಗೂ ಎರಡನೇ ಅತಿದೊಡ್ಡ ರಾಜ್ಯಗಳು. ಈ ಎರಡೂ ರಾಜ್ಯಗಳಲ್ಲೂ ಅಧಿಕಾರದಲ್ಲಿದ್ದ ಬಿಜೆಪಿ ಸೋತು, ಕಾಂಗ್ರೆಸ್‌ ಗೆದ್ದಿದೆ. ಪಕ್ಕದ ಛತ್ತೀಸ್‌ಗಢದಲ್ಲೂ ಕಾಂಗ್ರೆಸ್‌ ಗೆದ್ದಿದೆ. ಹೀಗಾಗಿ ಹಿಂದಿ ಬೆಲ್ಟ್‌ ಎಂದು ಕರೆಯಲ್ಪಡುವ ಭಾರತದ ನಕ್ಷೆಯ ಮಧ್ಯದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಬದಲು ಈಗ ಕಾಂಗ್ರೆಸ್‌ನ ಆಳ್ವಿಕೆ ಆರಂಭವಾಗಲಿದೆ. ಇನ್ನುಳಿದ ಎರಡು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬುದು ಆ ಪಕ್ಷಕ್ಕೆ ಸಮಾಧಾನಕರ ಸಂಗತಿ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ, ಕರ್ನಾಟಕದಲ್ಲಿ ಕಾಂಗ್ರೆಸ್‌ನ ಮೈತ್ರಿ ಸರ್ಕಾರವಿದೆ.

ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

2013ರ ನಂತರ ದೇಶದಲ್ಲಿ ಬಿಜೆಪಿ ಒಂದಾದ ಮೇಲೊಂದು ರಾಜ್ಯಗಳನ್ನು ಗೆಲ್ಲುತ್ತಾ ಬಂದಿತ್ತು. ಆ ಓಟಕ್ಕೆ ಇದೇ ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಬ್ರೇಕ್‌ ಬಿದ್ದಿದೆ.

ಬಿಜೆಪಿ, ಕಾಂಗ್ರೆಸ್ಸೇತರ ರಾಜ್ಯಗಳು:

ಸದ್ಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ, ಮಿಜೋರಂ ಹಾಗೂ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಸರ್ಕಾರಗಳಿವೆ.

ಯಾರೂ ಇಲ್ಲ: ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯ ಸರ್ಕಾರವೇ ಇಲ್ಲ.

ಗೆದ್ದಿರುವ ಕಾಂಗ್ರೆಸ್‌ಗೆ ಈಗ ಹೊಸ ತಲೆನೋವು!

ಕಾಂಗ್ರೆಸ್‌ ಆಡಳಿತ:

ಪಂಜಾಬ್‌, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಕರ್ನಾಟಕ (ಮೈತ್ರಿ)ದಲ್ಲಿ ಕಾಂಗ್ರೆಸ್‌ ಆಡಳಿತವಿದೆ.

ಬಿಜೆಪಿ ಆಡಳಿತ:

ಹಿಮಾಚಲ ಪ್ರದೇಶ, ಹರ್ಯಾಣ, ಉತ್ತರಾಖಂಡ, ಗುಜರಾತ್‌, ಉತ್ತರ ಪ್ರದೇಶ, ಬಿಹಾರ (ಮೈತ್ರಿ), ಜಾರ್ಖಂಡ, ಮಹಾರಾಷ್ಟ್ರ, ಗೋವಾ (ಮೈತ್ರಿ), ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಸಿಕ್ಕಿಂ, ಮೇಘಾಲಯದಲ್ಲಿ ಬಿಜೆಪಿ ಆಳ್ವಿಕೆಯಿದೆ.

ಅದರೊಂದಿಗೆ, 15 ರಾಜ್ಯಗಳಲ್ಲಿ ಬಿಜೆಪಿ, 5 ರಾಜ್ಯಗಳಲ್ಲಿ ಕಾಂಗ್ರೆಸ್‌ ಹಾಗೂ 9 ರಾಜ್ಯಗಳಲ್ಲಿ ಇತರ ಪಕ್ಷಗಳು ಅಧಿಕಾರದಲ್ಲಿದ್ದಂತಾಗಿದೆ.