ನವದೆಹಲಿ[ಅ.08]: ಸಂಸದರಿಗೆ ದೆಹಲಿಯಲ್ಲಿ ನೀಡಲಾಗುವ ಬಂಗಲೆಗಳನ್ನು ಸದಸ್ಯತ್ವ ಕಳೆದುಕೊಂಡ ನಂತರವೂ ಖಾಲಿ ಮಾಡದೇ ಇರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರವೇ ಖಾಲಿ ಮಾಡಿಸಲು ಮುಂದಾಗಿದೆ.

ಲೋಕಸಭಾ ಸದಸ್ಯತ್ವ ಕಳೆದುಕೊಂಡ 200 ಮಂದಿಗೆ ಆಗಸ್ಟ್‌ 19ರಂದೇ ಸಿ.ಆರ್‌.ಪಾಟೀಲ್‌ ನೇತೃತ್ವದ ಲೋಕಸಭಾ ವಸತಿ ಸಮಿತಿ ನಿಯಮಾವಳಿಯ ಪ್ರಕಾರ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಿತ್ತು. ಒಂದೊಮ್ಮೆ ಮೂರು ದಿನಗಳಲ್ಲಿ ಖಾಲಿ ಮಾಡದೇ ಇದ್ದಲ್ಲಿ ಬಂಗಲೆಯ ವಿದ್ಯುತ್‌, ನೀರು ಮತ್ತು ಅಡುಗೆ ಅನಿಲ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿತ್ತು. ಆ ಬಳಿಕ ಹೆಚ್ಚಿನವರು ಬಂಗಲೆ ಖಾಲಿದ್ದು, 50 ಮಂದಿ ಮಾಜಿ ಸಂಸದರು ಮಾತ್ರ ಈ ತನಕವೂ ಖಾಲಿ ಮಾಡಿಲ್ಲ ಎಂದು ಹೇಳಲಾಗಿದೆ.

ನಿಯಮಾವಳಿಯ ಪ್ರಕಾರ ಸಂಸತ್‌ ಸದಸ್ಯತ್ವ ಕಳೆದುಕೊಂಡ ಬಳಿಕ ಒಂದು ತಿಂಗಳಲ್ಲಿ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು. ಆದರೆ ಹೆಚ್ಚಿನವರು ಖಾಲಿ ಮಾಡಿರಲಿಲ್ಲ. ಆ ಕಾರಣ ವಸತಿ ಸಮಿತಿ ಖಾಲಿ ಮಾಡುವಂತೆ ಆದೇಶಿಸಿತ್ತು. ಮಾಜಿಗಳು ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ ಬಳಿಕ ಅದನ್ನು ನೂತನ ಸಂಸದರಿಗೆ ನೀಡಲಾಗುತ್ತದೆ.