ನವದೆಹಲಿ [ಅ.04]:  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಹವಾಲಾ ವ್ಯವಹಾರ ಆರೋಪಗಳಿಗೆ ಸಂಬಂಧಿಸಿ ಅವರ ಪುತ್ರಿ ಐಶ್ವರ್ಯಾರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.), ಗುರುವಾರ ಸಹೋದರ, ಸಂಸದ ಡಿ.ಕೆ. ಸುರೇಶ್‌ ಅವರ ವಿಚಾರಣೆ ನಡೆಸಿದೆ. ಶುಕ್ರವಾರವೂ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ. ಸುರೇಶ್‌ಗೆ ಇ.ಡಿ. ಸಮನ್ಸ್‌ ನೀಡಿದೆ.

ಇ.ಡಿ. ಸೂಚನೆಯಂತೆ ಖಾನ್‌ ಮಾರ್ಕೆಟ್‌ನ ಲೋಕ ನಾಯಕ್‌ ಭವನದಲ್ಲಿರುವ ಇ.ಡಿ. ಪ್ರಧಾನ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಡಿ.ಕೆ.ಸುರೇಶ್‌ ಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ. ಮೂಲಗಳ ಪ್ರಕಾರ ಬೆಳಗ್ಗೆಯೇ ಕಚೇರಿಗೆ ತೆರಳಿದ್ದರೂ ಡಿ.ಕೆ.ಸುರೇಶ್‌ ವಿಚಾರಣೆ ಮಧ್ಯಾಹ್ನದ ನಂತರವೇ ಪ್ರಾರಂಭವಾಗಿದೆ. ಸಂಜೆ 6.30ಕ್ಕೆ ಮೊದಲ ದಿನದ ವಿಚಾರಣೆ ಮುಗಿದಿದೆ.

ಡಿ.ಕೆ. ಶಿವಕುಮಾರ್‌ ಅವರ ಪ್ರಕರಣದ ವಿಚಾರಣೆ ಸಂದರ್ಭದಲ್ಲೇ ಇ.ಡಿ.ಯು ನ್ಯಾಯಾಲಯದಲ್ಲಿ ಡಿ.ಕೆ. ಸುರೇಶ್‌ ಅವರ ಆಸ್ತಿ ಬಗ್ಗೆ ಕೆಲ ಅನುಮಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಡಿ.ಕೆ.ಸುರೇಶ್‌ರನ್ನು ಈಗ ವಿಚಾರಣೆಗೆ ಕರೆಸಿಕೊಂಡಿರುವುದು ಮಹತ್ವ ಪಡೆದಿದ್ದು, ಡಿ.ಕೆ. ಶಿವಕುಮಾರ್‌ ಅವರ ಕುಟುಂಬದ ಇನ್ನಿತರ ಸದಸ್ಯರಿಗೂ ಶೀಘ್ರದಲ್ಲೇ ಇ.ಡಿ. ವಿಚಾರಣೆಯ ಬಿಸಿ ತಟ್ಟುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಶಾಸಕಿ, ಡಿ.ಕೆ. ಶಿವಕುಮಾರ್‌ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವ್ಯವಹಾರಗಳಿಗೆ ಸಂಬಂಧಿಸಿ ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಮಾಜಿ ಶಾಸಕ ಕೆ. ಎನ್‌.ರಾಜಣ್ಣ ಅವರಿಗೆ ಇ.ಡಿ. ಸಮನ್ಸ್‌ ನೀಡಿದ್ದು ಅ.9ಕ್ಕೆ ಅವರ ವಿಚಾರಣೆ ನಡೆಯಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವ್ಯಾವಹಾರಿಕ ನಂಟು: ಡಿ.ಕೆ. ಸುರೇಶ್‌ ಅವರ 28 ಆಸ್ತಿಗಳಲ್ಲಿ 10 ಆಸ್ತಿಗಳ ಬಗ್ಗೆ ಈಗಾಗಲೇ ಇ.ಡಿ.ಯು ನ್ಯಾಯಾಲಯದ ಎದುರು ತನ್ನ ಅನುಮಾನವನ್ನು ಹೊರಹಾಕಿತ್ತು. ಹೀಗಾಗಿ ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್‌ ಜತೆಗಿನ ವ್ಯಾವಹಾರಿಕ ನಂಟಿನ ಕುರಿತೇ ಡಿ.ಕೆ.ಸುರೇಶ್‌ ಅವರನ್ನು ಇ.ಡಿ. ಪ್ರಶ್ನಿಸಿದೆ. ಹಾಗೆಯೇ ವಿವಿಧ ವ್ಯಕ್ತಿಗಳೊಂದಿಗೆ ಅವರು ನಡೆಸಿರುವ ವ್ಯವಹಾರದ ಬಗ್ಗೆ ಮತ್ತು ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತವರ ಆಪ್ತರ ಮನೆಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಸಿಕ್ಕ ಹಣದಲ್ಲಿ .21 ಲಕ್ಷ ತಮ್ಮದೆಂದು ಈಗಾಗಲೇ ಡಿ.ಕೆ.ಸುರೇಶ್‌ ಕುಮಾರ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.

ಎಲ್ಲ ದಾಖಲೆ ನೀಡಿದ್ದೇನೆ: ದಿನದ ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್‌, 11 ಗಂಟೆಗೆ ವಿಚಾರಣೆಗೆ ಬರುವಂತೆ ಹೇಳಿದ್ದರು ಅದರಂತೆ ಹಾಜರಾಗಿದ್ದೇನೆ. ಅಧಿಕಾರಿಗಳು ಕೇಳಿದ ಮಾಹಿತಿ, ದಾಖಲೆಗಳನ್ನು ನೀಡಿದ್ದೇನೆ. ವಿಚಾರಣೆ ನಡೆಯುತ್ತಿರುವುದಿಂದ ನಾನು ಬಹಿರಂಗವಾಗಿ ಏನನ್ನೂ ಹೇಳಲಾರೆ. ಏನೆಲ್ಲಾ ಪ್ರಶ್ನೆ ಕೇಳುತ್ತಾರೆ, ನಾನು ಏನೆಲ್ಲಾ ಉತ್ತರ ನೀಡಿದ್ದೇನೆ ಎಂಬುದೆಲ್ಲವೂ ನಿಮಗೆ ಗೊತ್ತು. ಆ ಕುರಿತು ನಾನು ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.

ಇಂದು ಜೈಲಿನಲ್ಲಿ ಡಿಕೆಶಿ ವಿಚಾರಣೆ

ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರ ವಿಚಾರಣೆಯನ್ನು ಇ.ಡಿ.ಅಧಿಕಾರಿಗಳು ನಡೆಸಲಿದ್ದಾರೆ. ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ ನಂತರ 3 ಗಂಟೆವರೆಗೆ ಡಿ.ಕೆ.ಶಿವಕುಮಾರ್‌ ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಲಯವು ಇ.ಡಿ.ಗೆ ಅವಕಾಶ ನೀಡಿತ್ತು.

ಸೆ.4ರಿಂದ ಇ.ಡಿ. ಕಸ್ಟಡಿಯಲ್ಲಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು ಸೆ.14 ರಿಂದ ಸೆ.17ರ ತನಕ ಅವರ ಅನರೋಗ್ಯದ ಕಾರಣ ವಿಚಾರಣೆ ನಡೆಸಲು ಇ.ಡಿ.ಗೆ ಸಾಧ್ಯವಾಗಿರಲಿಲ್ಲ. ಸೆ.17ಕ್ಕೆ ಇ.ಡಿ. ಕಸ್ಟಡಿ ಮುಗಿದ ಬಳಿಕ ಡಿ.ಕೆ.ಶಿವಕುಮಾರ್‌ ಅವರನ್ನು ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇ.ಡಿ. ಕಸ್ಟಡಿಯಲ್ಲಿದ್ದ ನಾಲ್ಕು ದಿನ ಡಿ.ಕೆ.ಶಿವಕುಮಾರ್‌ ಅವರ ಅನಾರೋಗ್ಯದ ಕಾರಣ ವಿಚಾರಣೆ ನಡೆಸಲು ಇ.ಡಿ.ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನ್ಯಾಯಾಂಗ ಬಂಧನದಲ್ಲೇ ವಿಚಾರಣೆಗೆ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತ್ತು.