ಜಾರಕಿಹೊಳಿ ಬ್ರದರ್ಸ್ - ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪ್ರತಿಷ್ಠೆಯ ಸಮರವಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಡೆಗೂ ಸುಸೂತ್ರವಾಗಿ ನಡೆದಿದೆ. ಆದರೆ ಚುನಾವಣಾ ಸಂಧಾನದ ವೇಳೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಹೈಕಮಾಂಡ್ ಮುಂದೆ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ.
ಬೆಂಗಳೂರು : ತನ್ನ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿಚಾರಗಳಿಗೆ ಮಾತ್ರ ಲಕ್ಷ್ಮೀ ಹೆಬ್ಬಾಳ್ಕರ್ ಸೀಮಿತವಾಗಬೇಕು. ಬೆಂಗಳೂರಿನ ಪ್ರಭಾವಿಯ ಶಕ್ತಿ ಬಳಸಿ ಬೆಳಗಾವಿ ಜಿಲ್ಲಾಮಟ್ಟದ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೆಳಗಾವಿಯ ವ್ಯವಹಾರಗಳಿಗೆ ಕೈಹಾಕಬಾರದು.
ಪಿಎಲ್‌ಡಿ ಚುನಾವಣಾ ಸಂಧಾನದ ವೇಳೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ ಪ್ರಮುಖ ಷರತ್ತು ಇದು ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಳಗಾವಿ ನಾಯಕರ ಸಂಘರ್ಷ ರಾಜ್ಯ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ನೀಡಿತ್ತು.
- ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ವಿಚಾರಕ್ಕೆ ಸೀಮಿತವಾಗಬೇಕು
- ಬೆಂಗಳೂರಿನ ಪ್ರಭಾವ ಬಳಸಿ ಬೆಳಗಾವಿ ಜಿಲ್ಲೆಯ ವ್ಯವಹಾರಗಳಿಗೆ ತಲೆ ಹಾಕಬಾರದು
- ಹೆಬ್ಬಾಳ್ಕರ್‌ಗೆ ಆಪ್ತರಾದ ಸಚಿವ ಡಿಕೆಶಿ ಬೆಳಗಾವಿ ವಿಚಾರಗಳಲ್ಲಿ ಮೂಗು ತೂರಿಸಬಾರದು
- ಮಹಿಳಾ ಕೋಟದಲ್ಲಿ ಹೆಬ್ಬಾಳ್ಕರ್‌ಗೆ ಮಂತ್ರಿಸ್ಥಾನ ಕೊಡಿಸುವ ಲಾಬಿಗೆ ಮಣಿಯಬಾರದು
- ಮುಂದಿನ ಸಂಪುಟ ವಿಸ್ತರಣೆ ವೇಳೆ ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬೇಕು
