ಬೆಂಗಳೂರು :  ರಾಜ್ಯದಲ್ಲಿ ಸಾವಿರಾರು ಮಂದಿ ಚೀಟಿ, ಚಿಟ್‌ ಫಂಡ್ಸ್‌ ಹೆಸರಿನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಂಪನಿಯೊಂದು ಸಾವಿರಾರು ಮಂದಿಯಿಂದ ಚೀಟಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 48 ಕೋಟಿಯಷ್ಟುಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಮಾಯಕರಿಗೆ ಕಂಪನಿ ವಂಚನೆ ಮಾಡಿರುವ ಬಗ್ಗೆ ಸಹಕಾರ ಇಲಾಖೆ ಅಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂದಿರಾನಗರ ಚಿಟ್‌ ಫಂಡ್ಸ್‌ ಮತ್ತು ಟ್ರೇಡಿಂಗ್‌ ಕಂಪನಿಯ ನಿರ್ದೇಶಕ ಪಿ.ಕೆ.ಚಂದ್ರಶೇಖರ್‌ ಬಾಬು, ಚಂದ್ರಶೇಖರ್‌ ಪತ್ನಿ ವನಿತಾ ಬಾಬು, ಪುತ್ರ ವೈಶಾಕ್‌ ಬಾಬು, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ರವಿ ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ ಕುಮಾರ್‌ ಶಹಾಪುರ್‌ವಾಡ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಚಿಟ್‌ ಫಂಡ್ಸ್‌ ಮತ್ತು ಟ್ರೇಡಿಂಗ್‌ ಕಂಪನಿ ಪ್ರೈ.ಲಿ. ಸಂಸ್ಥೆಯು ಇಂದಿರಾನಗರ 1ನೇ ಹಂತದಲ್ಲಿ ಕಚೇರಿ ಹೊಂದಿದೆ. ಕಂಪನಿಯು ಒಂದು ಲಕ್ಷದಿಂದ .25 ಲಕ್ಷ ಮೊತ್ತದ ಚೀಟಿ ಗುಂಪುಗಳ ಮೂಲಕ ಸುಮಾರು 60 ಚೀಟಿ ಗುಂಪುಗಳಲ್ಲಿ 1,001 ಮಂದಿ ಗ್ರಾಹಕರಿಂದ ಒಟ್ಟು .47.87 ಕೋಟಿ ಕಟ್ಟಿಸಿಕೊಂಡಿದೆ. ಇಷ್ಟುಮೊತ್ತದ ಹಣವನ್ನು 2015ರ ಏ.1ರಿಂದ ಕಟ್ಟಿಸಿಕೊಂಡು ಇಲ್ಲಿ ತನಕ ಗ್ರಾಹಕರಿಗೆ ಹಣ ಪಾವತಿಸದೆ ವಂಚನೆ ಮಾಡಿದೆ.

ಇದಲ್ಲದೆ, ಗ್ರಾಹಕರು ಚೀಟಿ ಮೊತ್ತವನ್ನು ಡ್ರಾ ಮಾಡಿದ ಬಳಿಕ ಆ ಹಣವನ್ನು ಗ್ರಾಹಕರಿಗೆ ಪಾವತಿಸದ ಕಂಪನಿ ಬದಲಾಗಿ ಗ್ರಾಹಕರ ಮನವೊಲಿಸಿ ಚೀಟಿ ಮೊತ್ತವನ್ನು ಸಾಲ ಅಥವಾ ಠೇವಣಿಯಾಗಿ ಪಡೆದಿದೆ. ಕೆಲವರಿಗೆ ಚೀಟಿ ಮೊತ್ತದ ಹಣಕ್ಕೆ ಬದಲಾಗಿ ಚೆಕ್‌ ನೀಡಿದ್ದು, ಚೆಕ್‌ ಬೌನ್ಸ್‌ ಆಗಿದೆ. ಚೆಕ್‌ ಬೌನ್ಸ್‌ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಕಂಪನಿ ವಂಚನೆ ಮಾಡಿರುವ ಬಗ್ಗೆ ವಂಚನೆಗೊಳಗಾದವರು ಸಹಕಾರ ಇಲಾಖೆಗೆ ದೂರು ನೀಡಿದ್ದರು. ಸಹಕಾರ ಇಲಾಖೆ ಅಧಿಕಾರಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವಂಚನೆ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಕಂಪನಿ ಗ್ರಾಹಕರಿಗೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಂಬಂಧಪಟ್ಟಕಂಪನಿ ವಿರುದ್ಧ ಕ್ರಮಕೈಗೊಳ್ಳುವಂತೆ ಇಂದಿರಾನಗರ ಪೊಲೀಸ್‌ ಠಾಣೆಗೂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪ್ರತಿಯೊಬ್ಬರು ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಮೂರ್ನಾಲ್ಕು ತಿಂಗಳ ವೇತನ ಪಾವತಿಸಿಲ್ಲ:

ಕಂಪನಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ. ಇದರಿಂದಾಗಿ ಕಂಪನಿಯ ಸಿಬ್ಬಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೂರು ದಾಖಲಾದ ಬಳಿಕ ಕಂಪನಿಯ ವ್ಯವಹಾರ ಅರ್ಧಕ್ಕೆ ಸ್ಥಗಿತಗೊಳಿಸಿದೆ ಎಂದು ಹಿರಿಯ ಅಧಿಕಾರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮೋದಿ ನೋಟು ಬಂದ್‌ನಿಂದ ಪೆಟ್ಟು!

ಚಿಟ್‌ ಫಂಡ್ಸ್‌ ಮತ್ತು ಟ್ರೇಡಿಂಗ್‌ ಕಂಪನಿ ಪ್ರೈ.ಲಿ. ಸಂಸ್ಥೆಯು ಸುಮಾರು 40 ವರ್ಷಗಳಿಂದ ವ್ಯವಹಾರದಲ್ಲಿ ತೊಡಗಿದೆ. 2017ರ ನೋಟು ಅಮಾನ್ಯೀಕರಣದ ಬಳಿಕ ಕಂಪನಿ ನಷ್ಟದಲ್ಲಿ ನಡೆದಿದೆ. ಹಣ ಹೂಡಿಕೆ ಮಾಡಿದ್ದವರ ಪೈಕಿ ಕೆಲವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಂಡು ಸರಿಯಾಗಿ ಪಾವತಿಸಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಶೇ.10ರ ಬಡ್ಡಿ ದರದಲ್ಲಿ ಸಾಲ ತಂದು ಗ್ರಾಹಕರಿಗೆ ಮರಳಿಸಲಾಗುತ್ತಿದೆ ಎಂದು ಕಂಪನಿ ವ್ಯವಸ್ಥಾಪಕರು ಹೇಳಿಕೆ ನೀಡಿದ್ದಾರೆ ಎಂದು ತನಿಖಾಧಿಕಾರಿ ವಿವರಿಸಿದರು.

ವೈದ್ಯರು, ಸರ್ಕಾರಿ ಉದ್ಯೋಗಿಗಳೇ ಹೆಚ್ಚು!

ಕಂಪನಿಯಲ್ಲಿ ಹಣ ತೊಡಗಿಸಿರುವವರ ಪೈಕಿ ವೈದ್ಯರು ಹಾಗೂ ಸರ್ಕಾರಿ ಉದ್ಯೋಗಿಗಳೇ ಹೆಚ್ಚಾಗಿದ್ದಾರೆ. ಸ್ಥಳೀಯ ರಾಜಕಾರಣಿಗಳು ಹಣ ಹೂಡಿಕೆ ಮಾಡಿದ್ದಾರೆ. ಕೆಲವರು ನಿವೃತ್ತಿ ಬಳಿಕ ಬಂದ ಹಣವನ್ನು ಹೂಡಿಕೆ ಮಾಡಿದ್ದು, ಒಬ್ಬೊಬ್ಬರೇ ಬಂದು ದೂರು ನೀಡುತ್ತಿದ್ದಾರೆ. ಪ್ರತಿಯೊಬ್ಬರ ದೂರು ಸ್ವೀಕರಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

ಬೇನಾಮಿ ಆಸ್ತಿ ಶಂಕೆ?

ಸಹಕಾರ ಇಲಾಖೆ ಅಧೀಕ್ಷ ಮುರಳೀಧರ್‌ ಅವರು ತನಿಖೆ ನಡೆಸಿದ್ದು, ಕಂಪನಿಯು ಸಾರ್ವಜನಿಕರ ಹಣದಲ್ಲಿ ಬೇನಾಮಿ ಆಸ್ತಿ ಮಾಡಿರುವ ಶಂಕೆ ಇದೆ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರು ತುಟಿ ಬಿಚ್ಚುತ್ತಿಲ್ಲ. ಸಾರ್ವಜನಿಕರ ಹಣ ಎಲ್ಲಿ ಹೋಯ್ತು ಎಂಬುದರ ಬಗ್ಗೆಯೂ ಸೂಕ್ತ ಕಾರಣ ನೀಡುತ್ತಿಲ್ಲ. ಕಂಪನಿಯ ವ್ಯವಹಾರ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಂಪನಿ ವಂಚನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಮೇಲ್ನೋಟಕ್ಕೆ ಕಂಪನಿ ಸಾರ್ವಜನಿಕರ ಹಣದಲ್ಲಿ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಠಾಣೆಗೆ ದೂರು ನೀಡಲಾಗಿದೆ.

-ಮುರಳೀಧರ್‌, ಸಹಕಾರ ಇಲಾಖೆಯ ಅಧೀಕ್ಷಕರು

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಕಂಪನಿಗೆ ಬೀಗ ಹಾಕಲಾಗಿದೆ. ಮಧ್ಯಮ ವರ್ಗದಿಂದ ಶ್ರೀಮಂತರ ತನಕ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

-ರಾಹುಲ್‌ ಕುಮಾರ್‌ ಶಹಾಪುರವಾಡ್‌, ಡಿಸಿಪಿ