ಶಿರಾ : ದೇವರ ಪ್ರಸಾದ ಸೇವಿಸಿ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿ​ರುವ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಚಿನ್ನಪ್ಪನಹಳ್ಳಿಯಲ್ಲಿ ನಡೆ​ದಿದ್ದು, ಕಲುಷಿತ ಆಹಾರ ಸೇವನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಇಲ್ಲಿನ ಆಂಜ​ನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಹರಿ​ಸೇವೆ ಕಾರ್ಯ​ಕ್ರ​ಮ​ ಏರ್ಪಡಿಸಲಾಗಿತ್ತು. 

ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದವರಿಗೆ ಪ್ರಸಾದವಾಗಿ ಅನ್ನ, ಸಾಂಬಾರು ಮತ್ತು ಪಲ್ಯ ವಿತ​ರಿ​ಸ​ಲಾ​ಗಿ​ತ್ತು. ಪ್ರಸಾದ ಸ್ವೀಕರಿಸಿದ 45ಕ್ಕೂ ಹೆಚ್ಚು ಭಕ್ತರಿಗೆ ಭಾನುವಾರ ಬೆಳಗ್ಗೆ ಹೊಟ್ಟೆನೋವು, ವಾಂತಿ, ​ಭೇದಿ ಕಾಣಿ​ಸಿ​ಕೊಂಡಿದ್ದು, ತಕ್ಷಣ ಅಸ್ವಸ್ಥಗೊಂಡವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 8ಕ್ಕೂ ಹೆಚ್ಚು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಕಲುಷಿತ ಆಹಾರ ಸೇವನೆಯಿಂದ ಘಟನೆ ಸಂಭವಿಸಿರಬಹುದು. ಯಾರು ಆತಂಕ ಪಡಬೇಕಾಗಿಲ್ಲ. ಇದು ಸಾಮಾನ್ಯ ರೀತಿಯ ಪ್ರಕರಣವಾಗಿದ್ದು, ಪ್ರಾಣಾಪಾಯದ ಭಯವಿಲ್ಲ ಎಂದು ಶಿರಾ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅಜ್ಗರ್‌ ಬೇಗ್‌ ತಿಳಿಸಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗದಿದ್ದರೂ, ಪೊಲೀಸರೇ ಸ್ವಯಂ ಪ್ರೇರಿತರಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.