ಬೆಂಗಳೂರು (ಆ.11):  ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಶನಿವಾರ ರಾಜ್ಯದ 46 ಕಡೆ ರಸ್ತೆ ಸಂಚಾರ ಬಂದ್‌ ಮಾಡಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಡಕಾಯಿತು. ಕೆಎಸ್‌ಆರ್‌ಟಿಸಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳುವ 400 ಬಸ್‌ಗಳ ಸಂಚಾರ ಸ್ಥಗಿತಗೊಳಿಸಿತು.

ಕಳೆದ ಐದು ದಿನಗಳಿಂದ ಭಾರೀ ಮಳೆ ಹಾಗೂ ಪ್ರವಾಹದಿಂದ ಹಲವು ಕಡೆ ರಸ್ತೆಗಳ ಮೇಲೆ ಮಣ್ಣು ಕುಸಿತ, ಗುಡ್ಡ ಕುಸಿತ, ಮರಗಳು ಬೀಳುವುದು, ನದಿ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿ, ಮಂಗಳೂರು, ಮುಂಬೈ, ಕಾಸರಗೋಡು, ತ್ರಿಶೂರ್‌ ಸೇರಿದಂತೆ ಹಲವು ಮಾರ್ಗಗಳಲ್ಲಿ ಹೆಚ್ಚು ಸಮಸ್ಯೆಯಾಗಿದೆ. 

ಈ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿಯ 41 ಬಸ್‌ಗಳು ಮಾರ್ಗ ಮಧ್ಯೆ ಸಿಲುಕಿದ್ದು, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ 19 ಬಸ್‌ಗಳನ್ನು ಒದಗಿಸಲಾಗಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಪರಿಹಾರ ಕಾರ್ಯಾಚರಣೆಗಾಗಿ ಶನಿವಾರ ಬೆಂಗಳೂರಿಗೆ ಆಗಮಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಪ್ರಯಾಣಕ್ಕೆ ಮೂರು ವೋಲ್ವೋ ಬಸ್‌ ನೀಡಲಾಗಿದೆ. ಇನ್ನು ಬಸ್‌ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲಾಗುತ್ತಿದೆ. ಪ್ರವಾಹ ಪ್ರದೇಶಗಳಲ್ಲಿ ನಿಗಮದ ತಂಡಗಳು ಬೀಡುಬಿಟ್ಟಿದ್ದು, ತುರ್ತು ಪರಿಹಾರದಲ್ಲಿ ತೊಡಗಿವೆ ಎಂದು ಹೇಳಿದರು.