ಪ್ರಾಥಮಿಕ ತನಿಖೆ ಪ್ರಕಾರ ಸುಮಾರು 40 ಕೆಜಿ ತೂಕದ ಚಿನ್ನ ಕಳ್ಳತನವಾಗಿದ್ದು, ಶಾಖೆಯ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.
ಹೈದರಾಬಾದ್(ಡಿ.28): ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಂಪನಿ ಮೇಲೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ ನಾಲ್ವರು ಖದೀಮರ ಗುಂಪು 40 ಕೆಜಿ ತೂಕದ ಚಿನ್ನವನ್ನು ದರೋಡೆ ಮಾಡಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್'ನ ಹೊರ ವಲಯದ ಆರ್'ಸಿಪುರದಲ್ಲಿರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಶಾಖೆಗೆ ಇಂದು ಬೆಳಗ್ಗೆ 9.30ಕ್ಕೆ ಕೆಂಪು ಬಣ್ಣದ ಸ್ಕಾರ್ಪಿಯೊ ಕಾರಿನಲ್ಲಿ ಬಂದ ನಾಲ್ವರು ಆಗುಂತಕರು ತಾವು ಸಿಬಿಐ ಅಧಿಕಾರಿಗಳಾಗಿದ್ದು, ಹಣ ವಿನಿಮಯ ಸಂಬಂಧ ತಪಾಸಣೆ ನಡೆಸಲು ಆಗಮಿಸಿರುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಸಂಸ್ಥೆ ಸಿಬ್ಬಂದಿ, ನಾಲ್ವರನ್ನು ಕಚೇರಿ ಒಳಗೆ ಬಿಟ್ಟುಕೊಂಡಿದ್ದಾರೆ.
ಈ ವೇಳೆ ಸಿಬ್ಬಂದಿಗೆ ಗನ್'ನಿಂದ ಶೂಟ್ ಮಾಡುವುದಾಗಿ ಹೆದರಿಸಿ ಚಿನ್ನ ಮತ್ತು ಶಾಖೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಉಪಕರಣಗಳನ್ನು ಖದೀಮರು ಕದ್ದೊಯ್ದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ವಿಶ್ವ ಪ್ರಸಾದ್ ಹೇಳಿದ್ದಾರೆ. ಅದರ ಪ್ರಾಥಮಿಕ ತನಿಖೆ ಪ್ರಕಾರ ಸುಮಾರು 40 ಕೆಜಿ ತೂಕದ ಚಿನ್ನ ಕಳ್ಳತನವಾಗಿದ್ದು, ಶಾಖೆಯ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುತ್ತೂಟ್ ಸಿಬ್ಬಂದಿ, ‘‘ಗುಂಪಿನಲ್ಲಿ ಐವರು ಸದಸ್ಯರಿದ್ದು, ಓರ್ವ ಸಂಚಾರಿ ಪೊಲೀಸರಂತೆ ದಿರಿಸು, ಇತರರು ಮಂಕಿ ಟೋಪಿ ಧರಿಸಿದ್ದರು. ಸಿಬಿಐ ಅಧಿಕಾರಿಗಳೆಂದು ಹೇಳಿದ ದುಷ್ಕರ್ಮಿಗಳು, ಶಾಖೆಯಲ್ಲಿ ದೊಡ್ಡ ಹಗರಣ ನಡೆದಿದೆ ಈ ಬಗ್ಗೆ ತನಿಖೆ ನಡೆಸಲು ಆಗಮಿಸಿರುವುದಾಗಿ ಹೇಳಿದರು. ಅವರನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿಗೆ ಗುರಿಯಾಗಿಸಿ ಗನ್ ತೋರಿಸಿ ಮೂಲೆಯಲ್ಲಿ ಕೂಡಿ ಹಾಕಿ ಚೀಲ ಮತ್ತು ಬೆಡ್'ಶೀಟ್'ನಲ್ಲಿ ಚಿನ್ನವನ್ನು ಕದ್ದೊಯ್ದಿದ್ದಾರೆ,’’ ಎಂದು ತಿಳಿಸಿದ್ದಾರೆ.
