ಐಸಿಸ್‌ ಉಗ್ರಗಾಮಿ ಸಂಘಟನೆ ಸೇರಿದ್ದರು ಎನ್ನಲಾದ ಕಾಸರಗೋಡಿನ ಕುಟುಂಬವೊಂದರ ಮೂವರು ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ 4 ಮಂದಿ ಸಾವಪ್ಪಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದ ವ್ಯಕ್ತಿಗಳ ಸಂಬಂಧಿಕರೊಬ್ಬರಿಂದ ಈ ಮಾಹಿತಿ ಲಭ್ಯವಾಗಿದೆ.

ತಿರುವನಂತಪುರಂ: ಐಸಿಸ್‌ ಉಗ್ರಗಾಮಿ ಸಂಘಟನೆ ಸೇರಿದ್ದರು ಎನ್ನಲಾದ ಕಾಸರಗೋಡಿನ ಕುಟುಂಬವೊಂದರ ಮೂವರು ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ 4 ಮಂದಿ ಸಾವಪ್ಪಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದ ವ್ಯಕ್ತಿಗಳ ಸಂಬಂಧಿಕರೊಬ್ಬರಿಂದ ಈ ಮಾಹಿತಿ ಲಭ್ಯವಾಗಿದೆ.

ಕಾಸರಗೋಡಿನಿಂದ ನಾಪತ್ತೆಯಾಗಿ 2016ರಲ್ಲಿ ಐಸಿಸ್‌ ಸಂಘಟನೆ ಸೇರಿದ್ದ ಕೇರಳದ 21 ಯುವಕರ ಪೈಕಿ ಸಾವನ್ನಪ್ಪಿದ ನಾಲ್ವರು ಸೇರಿದ್ದಾರೆ. ಇವರು ಸಾವನ್ನಪ್ಪಿರುವ ಬಗ್ಗೆ ಸಂಬಂಧಿಕರೊಬ್ಬರಿಗೆ ಸಂದೇಶ ಲಭ್ಯವಾಗಿದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್‌ ಸದಸ್ಯ ವಿ.ಪಿ.ಪಿ. ಮುಸ್ತಫಾ ಹೇಳಿದ್ದಾರೆ. ಆದರೆ, ನಾಲ್ವರು ಹೇಗೆ ಸಾವನ್ನಪ್ಪಿದ್ದಾರೆ? ಸುದ್ದಿಯ ಮೂಲ ಹಾಗೂ ಎಲ್ಲಿಂದ ಸಂದೇಶ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪಡಾನಾದ ಶಿಹಾಸ್‌, ಆತನ ಪತ್ನಿ ಅಜ್ಮಲಾ ಮತ್ತು ಮಗ, ಕಾಸರಗೋಡು ಜಿಲ್ಲೆಯ ತ್ರಿಕಾರಿಪುರದ ಮುಹಮ್ಮದ್‌ ಮನ್ಸದ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ 21 ಮಂದಿ ದೇಶಬಿಟ್ಟು ಪರಾರಿಯಾಗಿ ಐಸಿಸ್‌ ಸೇರಿದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಅವರಲ್ಲಿ 17 ಮಂದಿ ಕಾಸರಗೋಡಿನವರಾಗಿದ್ದು, ನಾಲ್ವರು ಪಾಲಕ್ಕಾಡ್‌ನವರಾಗಿದ್ದಾರೆ. ಅಲ್ಲದೇ ಅವರಲ್ಲಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದರು. ಈ ವ್ಯಕ್ತಿಗಳು ಸಿರಿಯಾ ಮತ್ತು ಅಷ್ಘಾನಿಸ್ತಾನಕ್ಕೆ ತೆರಳಿ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದರು.