ಆನೇಕಲ್‌ :  ಲಾರಿ ಹಾಗೂ ಕ್ಯಾಂಟರ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕ್ಯಾಂಟರ್‌ನಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸೂರ್ಯಾಸಿಟಿ ಠಾಣಾ ವ್ಯಾಪ್ತಿಯ ತಿರುಮಗೊಂಡನಹಳ್ಳಿ (ರಾಷ್ಟ್ರೀಯ ಹೆದ್ದಾರಿ-7) ಬಳಿ ನಡೆದಿದೆ.

ಮೃತಪಟ್ಟವರನ್ನು ಬಿಹಾರ ಮೂಲದ ಪಿಂಟು(21), ರತನ್‌ (22), ಪರಮೇಶ್‌ (24), ವಿನೋದ್‌(24) ಎಂದು ಗುರುತಿಸಲಾಗಿದೆ. ಎಲ್ಲರೂ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇನ್ನು ಕ್ಯಾಂಟರ್‌ನ ಮೇಲ್ಭಾಗದಲ್ಲಿ ಕುಳಿತ್ತಿದ್ದ ಹಾಗೂ ಲಾರಿಯಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಅದರಲ್ಲಿ ಶಿವು ಎಂಬುವವರಿಗೆ ತೀವ್ರವಾಗಿ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಮುಂಜಾನೆ 5.30ರ ಸುಮಾರಿನಲ್ಲಿ ಅಪಘಾತ ನಡೆದಿದೆ. ಇಟ್ಟಿಗೆಯನ್ನು ಗ್ರಾಹಕರೊಬ್ಬರಿಗೆ ಪೂರೈಸಲು ಕ್ಯಾಂಟರ್‌ ತೆರಳುತ್ತಿತ್ತು. ಈ ಕ್ಯಾಂಟರ್‌ ಅತ್ತಿಬೆಲೆ ಕಡೆಯಿಂದ ಬಂದು ತಿರುಮಗೊಂಡನಹಳ್ಳಿ ಬಳಿ ಹೆದ್ದಾರಿಯಲ್ಲಿ ಚಾಲಕ ವೇಗವಾಗಿ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಸರಕು ಸಾಗಣೆ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕ್ಯಾಂಟರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಕ್ಯಾಂಟರ್‌- ಲಾರಿ ನಡುವಿನ ಅಪಘಾತದಿಂದ ಹೆದ್ದಾರಿ 7ರಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಸೂರ‍್ಯನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಲಾರಿ ಮತ್ತು ಕ್ಯಾಂಟರ್‌ ಅನ್ನು ಜೆಸಿಬಿ ಸಹಾಯದಿಂದ ಬೇರ್ಪಡಿಸಿ ತೆರವುಗೊಳಿಸಿದರು. ಬಳಿಕ ಸಂಚಾರ ವ್ಯವಸ್ಥೆ ಸುಗಮವಾಯಿತು.