ಲಾಹೋರ್(ಮೇ.08): ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ವಿಶ್ವದಾದ್ಯಂತ ಮುಸ್ಲಿಂ ಭಾಂಧವರು ಇಸ್ಲಾಂನ ನೈಜ ಸಾರವನ್ನು ಉಪವಾಸ ಇರುವ ಮೂಲಕ ಜಗತ್ತಿಗೆ ಸಾರುತ್ತಿದ್ದಾರೆ.

ಆದರೆ ಇಸ್ಲಾಂನ್ನೇ ಬಂಡವಾಳ ಮಾಡಿಕೊಂಡಿರುವ ಉಗ್ರರು ಮಾತ್ರ ಧರ್ಮಕ್ಕೂ, ಮಾನವೀಯತೆಗೂ ಅವಮಾನ ಮಾಡುವ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.

ಅದರಂತೆ ಪಾಕಿಸ್ತಾನದ ಲಾಹೋರ್ನ ಡಾತಾ ದರ್ಬಾರ್ ಸೂಫಿ ಮಸೀದಿಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಪರಿಣಾಮ ಸ್ಥಳದಲ್ಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 

ಬಾಂಬ್ ಸ್ಫೋಟದ ರಭಸಕ್ಕೆ ಮಸಿದಿಯ ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿದ್ದು, ಮಸೀದಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಗಳೂ ಕೂಡ ಛಿದ್ರವಾಗಿವೆ. 

ಈ ಕುರಿತು ಮಾಹಿತಿ ನೀಡಿರುವ ಲಾಹೋರ್ ಪೊಲೀಸ್ ಆಯುಕ್ತ ಘಝಂಫರ್ ಅಲಿ, ಸ್ಫೋಟ ಸಂಭವಿಸಿದ ಸಮಯದಲ್ಲಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು ಎಂದು ಹೇಳಿದ್ದಾರೆ. 

ಡಾತಾ ದರ್ಬಾರ್ ಸೂಫಿ ಮಸೀದಿ ಲಾಹೋರ್ನ ಖ್ಯಾತ ಪ್ರವಾಸಿ ತಾಣವಾಗಿದ್ದು, ಇಲ್ಲಿ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.