ರಾಯಪುರ್(ಅ.27): ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಇಂದು ಸಂಜೆ 4 ಗಂಟೆಯ ಸುಮಾರಿಗೆ ಬಿಜಾಪುರ್ ಜಿಲ್ಲೆಯ ಮುರ್ದಂದ್ ಸಿಆರ್‌ಪಿಎಫ್ ಕ್ಯಾಂಪ್ ಸಮೀಪ ಸಿಆರ್‌ಪಿಎಫ್ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

ಈ ಕುರಿರು ಮಾಹಿತಿ ನೀಡಿದ ಬಿಜಾಪುರ್ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್, ಘಟನೆಯಲ್ಲಿ ನಾಲ್ವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಯಾಂಪ್ ನಿಂದ 1 ಕಿ.ಮೀ.ದೂರದಲ್ಲಿ ಸಿಆರ್‌ಪಿಎಫ್ ನ 6 ಸಿಬ್ಬಂದಿ ತೆರಳುತ್ತಿದ್ದ ಎಂಪಿವಿ(ಸ್ಫೋಟ ನಿರೋಧಕ ವಾಹನ) ವಾಹನವನ್ನು ಪ್ರಬಲ ನೆಲಬಾಂಬ್ ಬಳಸಿ ಸ್ಫೋಟಿಸಿಲಾಗಿದೆ ಎಂದು ಗರ್ಗ್ ತಿಳಿಸಿದ್ದಾರೆ.