ಬೆಂಗಳೂರು :  ಉದ್ಯಾನನಗರಿ ಹೃದಯ ಭಾಗದಲ್ಲಿರುವ ಕಬ್ಬನ್‌ಪಾರ್ಕ್ನ 120 ಮರ ಸೇರಿದಂತೆ 3800ಕ್ಕೂ ಹೆಚ್ಚು ಮರಗಳ ಬಲಿ ಮೂಲಕ ಹಸಿರು ಹೊದಿಕೆ ನಗರದ ಕಳಚುವುದು ಮಾತ್ರವಲ್ಲ. ಎಂಟು ಪ್ರಮುಖ ಕೆರೆಗಳ ಬಫರ್‌ ಜೋನ್‌ಗೂ ಉದ್ದೇಶಿತ ಎಲಿವೇಟೆಡ್‌ ಕಾರಿಡಾರ್‌ ಕಂಟಕವಾಗಲಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯು ಹೆಬ್ಬಾಳ ಕೆರೆ, ಕೆ.ಆರ್‌.ಪುರ, ಸರ್ವಜ್ಞನಗರ, ಹಲಸೂರು ಕೆರೆ ಸೇರಿದಂತೆ ಹತ್ತು ಪ್ರಮುಖ ಕೆರೆಗಳ ಬಫರ್‌ಜೋನ್‌ ಒತ್ತುವರಿ ಮಾಡಲಿದೆ. ಎಲಿವೇಟೆಡ್‌ ಕಾರಿಡಾರ್‌ನಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮದಿಂದಾಗಿ ಈ ಕೆರೆಗಳ ನೀರಿನ ಮೂಲ ಹಾಗೂ ಜಲಚರಗಳಿಗೆ ಧಕ್ಕೆ ಆಗಲಿದೆ ಎಂಬ ಆತಂಕ ಪರಿಸರ ತಜ್ಞರಿಂದ ವ್ಯಕ್ತವಾಗಿದೆ.

ರಾಜ್ಯ ಸರ್ಕಾರವು ಕೆಆರ್‌ಸಿಡಿಎಲ್‌ ಮೂಲಕ ಸಂಚಾರದಟ್ಟಣೆ ಪರಿಹಾರಕ್ಕಾಗಿ 25 ಸಾವಿರ ಕೋಟಿ ವೆಚ್ಚದಲ್ಲಿ 102 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾಗಿದೆ. 2022ರ ಒಳಗಾಗಿ ಯೋಜನೆ ಪುರ್ಣಗೊಳಿಸುವ ಗುರಿಯನ್ನೂ ನಿಗದಿಪಡಿಸಿಕೊಂಡಿದೆ. ಇದರ ಮುಂದುವರಿದ ಪ್ರಯತ್ನವಾಗಿ ಟೆಂಡರ್‌ ಆಹ್ವಾನಿಸಿದೆ. ಈ ನಡುವೆ ಯೋಜನೆಯಿಂದ ಪರಿಸರ ಮೇಲೆ ಉಂಟಾಗಬಹುದಾದ ಅಧ್ಯಯನ ವರದಿಯಲ್ಲಿ ಪ್ರಮುಖ ಉದ್ಯಾನವಾಗಿರುವ ಕಬ್ಬನ್‌ಪಾರ್ಕ್, ಎಂಟು ಪ್ರಮುಖ ಕೆರೆಗಳಿಗೆ ತೀವ್ರ ಧಕ್ಕೆ ಉಂಟಾಗಲಿದ್ದು, ಜತೆಗೆ 3,800 ಮರಗಳೂ ಬಲಿಯಾಗಲಿವೆ ಎಂಬ ಆಘಾತಕಾರಿ ಅಂಶವನ್ನು ಸರ್ಕಾರವೇ ಬಹಿರಂಗಪಡಿಸಿದೆ.

ನಗರಾಭಿವೃದ್ಧಿ ಹಾಗೂ ಪರಿಸರ ಇಲಾಖೆ ನಿಯಮಗಳ ಪ್ರಕಾರ ಕೆರೆಯಿಂದ ಕನಿಷ್ಠ 30 ಮೀಟರ್‌ ಬಫರ್‌ ಜೋನ್‌ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಹಾಗೂ ನಿರ್ಮಾಣ ಚಟುವಟಿಕೆ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಕೆರೆ ಹಾಗೂ ಜಲಚರಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ. ಹೀಗಿದ್ದರೂ ಕೆಆರ್‌ಸಿಡಿಎಲ್‌ನ ಅಧಿಕಾರಿಗಳು ಮಾತ್ರ ನೀರಿನ ಮೂಲಕ್ಕೆ ಮತ್ತು ಅಲ್ಲಿನ ಜಲಚರಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಆಗುವುದಿಲ್ಲ ಎಂಬ ವಾದದೊಂದಿಗೆ ನಿಯಮ ಉಲ್ಲಂಘನೆಗೆ ಮುಂದಾಗಿದ್ದಾರೆ.

ಹಾನಿ ಆಗುವ ಕೆರೆಗಳು:

ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಅಗರ ಕೆರೆ ಹಾಗೂ ಚಳ್ಳಕೆರೆಯ ತಲಾ 30 ಮೀಟರ್‌, ಕೆಆರ್‌ಪುರ ಕೆರೆ ಹಾಗೂ ಸರ್ವಜ್ಞನಗರ ಕೆರೆಯ ತಲಾ 20 ಮೀಟರ್‌, ಹೆಬ್ಬಾಳ ಕೆರೆ, ಹಲಸೂರು ಕೆರೆ, ವರ್ತೂರು ಕೆರೆ, ವೃಷಭಾವತಿ ಕೆರೆ ತಲಾ 5 ಮೀಟರ್‌ ಭೂಮಿ ಪ್ರದೇಶ ಆಹುತಿ ಆಗಲಿದೆ. ಅಷ್ಟೇ ಅಲ್ಲದೆ ಯೋಜನೆಯು ರಾಜಕಾಲುವೆಯ ಬಫರ್‌ ಜೋನ್‌ ವ್ಯಾಪ್ತಿಯನ್ನೂ ನುಂಗಲಿದ್ದು, ಬಾಣಸವಾಡಿ ಮತ್ತು ಶಾಂತಿನಗರದ ರಾಜಕಾಲುವೆ ತಲಾ 1 ಮೀಟರ್‌ ಯೋಜನೆಗೆ ಸ್ವಾಧೀನವಾಗಲಿದೆ.

3800 ಮರ ನಾಶ:

ಯೋಜನೆಗಾಗಿ ನಗರದ ಒಟ್ಟು 3,800ಕ್ಕೂ ಹೆಚ್ಚು ಮರಗಳನ್ನು ಬಲಿ ನೀಡಲು ಗುರುತಿಸಲಾಗಿದೆ. ಪ್ರಮುಖವಾಗಿ ಕಬ್ಬನ್‌ ಪಾರ್ಕ್ನಲ್ಲಿ 120, ಜಯಮಹಲ್‌ ರಸ್ತೆಯ ಅರಮನೆ ಬಳಿ 356, ಕೋಲ್ಸ್‌ ಪಾರ್ಕ್ನಲ್ಲಿ 47, ಐಐಎಸ್ಸಿ ಕ್ಯಾಂಪಸ್‌ ಹಾಗೂ ಸಿವಿ ರಾಮನ್‌ ರಸ್ತೆಯಲ್ಲಿ 195, ಐಐಎಸ್ಸಿ ಕ್ಯಾಂಪಸ್‌ ಯಶವಂತಪುರ ರಸ್ತೆಯಲ್ಲಿ 32, ರಾಜಾ ರಾಮ್‌ ಮೋಹನ್‌ ರಾಯ್‌ ರಸ್ತೆಯ 108 ಮರಗಳಿಗೆ ಕೊಡಲಿ ಬೀಳಲಿದೆ.

ಕಳೆದ 2017 ರಲ್ಲಿ ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಸಿ) ಸಮೀಕ್ಷೆ ನಡೆಸಿದ ಪ್ರಕಾರ 1973ರಲ್ಲಿ ನಗರದಲ್ಲಿ ಶೇ.68.1ರಷ್ಟಿದ್ದ ಕಾಡು, 2002ರ ವೇಳೆಗೆ ಶೇ.38ಕ್ಕೆ ಇಳಿಕೆ ಆಗಿದೆ. 2020ರ ವೇಳೆಗೆ ನಗರೀಕರಣ, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಂದ ಶೇ.2.96ರಷ್ಟುಮಾತ್ರ ಮರಗಳು ನಗರದಲ್ಲಿ ಉಳಿಯಲಿವೆ ಎಂದು ಸಮೀಕ್ಷೆಯಲ್ಲಿ ಹೇಳಿದೆ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೈ ಹಾಕಿರುವ ಸಾಹಸಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಸಾವಿರ ಕಟ್ಟಡಕ್ಕೂ ಕುತ್ತು

ಯೋಜನೆಯ ವಿಸ್ತೃತ ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಿರುವ ಪ್ರಕಾರ ನಗರದ ಒಟ್ಟು 1,130 ಕಟ್ಟಡಗಳಿಗೆ ಕಂಠಕ ಬರಲಿದೆ. ಅದರಲ್ಲಿ 209 ವಸತಿ ಕಟ್ಟಡಗಳು, 576 ವಾಣಿಜ್ಯ ಉದ್ದೇಶಿತ ಕಟ್ಟಡಗಳು ಹಾಗೂ ವಸತಿ ಹಾಗೂ ವಾಣಿಜ್ಯ ಉದ್ದೇಶ ಎರಡಕ್ಕೂ ಬಳಕೆಯಾಗುವ 21 ಕಟ್ಟಡಗಳು ಹಾನಿ ಆಗಲಿದೆ. ಒಂಬತ್ತು ಸರ್ಕಾರಿ ಕಚೇರಿ, ಒಂದು ಆಸ್ಪತ್ರೆ, ಒಂದು ಸಭಾಂಗಣ ಸೇರಿದಂತೆ 13 ಸರ್ಕಾರಿ ಕಟ್ಟಡಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಲಿದೆ.

ಕಾರಿಡಾರ್‌    ವ್ಯಾಪ್ತಿ    ನಾಶ ಆಗುವ ಕಟ್ಟಡಗಳು

ಉತ್ತರ -ದಕ್ಷಿಣ ಕಾರಿಡಾರ್‌    ಹೆಬ್ಬಾಳ-ಸೀಲ್‌್ಕ ಬೋರ್ಡ್‌    295

ಉತ್ತರ- ದಕ್ಷಿಣ ಕಾರಿಡಾರ್‌    ಶಾಂತಿನಗರ- ಆಡುಗೋಡಿ    155

ಪೂರ್ವ-ಪಶ್ಚಿಮ ಕಾರಿಡಾರ್‌1    ಕೆ.ಆರ್‌.ಪುರ ಬಳಿಯ ಭಟ್ಟರಹಳ್ಳಿ- ಗೊರಗುಂಟೆಪಾಳ್ಯ    255

ಪೂರ್ವ- ಪಶ್ಚಿಮ    ವರ್ತೂರು ಕೋಡಿ-ದೀಪಾಂಜಲಿನಗರ    543

ಪೂರ್ವ- ಪಶ್ಚಿಮ ಸಂಪರ್ಕ ಕಲ್ಪಿಸುವ ಕಾರಿಡಾರ್‌    ---    52

ಬೇಕಾಗುವ ಭೂಮಿ

ಹಂತ    ಜಾಗ (ಹೆಕ್ಟೇರ್‌ಗಳಲ್ಲಿ)

-ಮೊದಲ ಹಂತ    12.93

-ಎರಡನೇ ಹಂತ    35.78

-ಮೂರನೇ ಹಂತ    0.57

-ನಾಲ್ಕನೇ ಹಂತ    4.10

-ಐದನೇ ಹಂತ    3.50

- ಒಟ್ಟು    57

ದೇವಸ್ಥಾನ, ಮಸೀದಿಗೂ ಧಕ್ಕೆ

ಯೋಜನೆಗೆ 12 ದೇವಸ್ಥಾನ , 10 ಪ್ರಾರ್ಥನಾ ಮಂದಿರ, ಮೂರು ಮಸೀದಿಗಳು ಹಾಗೂ ಒಂದು ಚಚ್‌ರ್‍, ಒಂದು ಕ್ರೈಸ್ತ ಪ್ರಾರ್ಥನಾ ಮಂದಿಗಳು ಸೇರಿದಂತೆ ಒಟ್ಟು 32 ಧಾರ್ಮಿಕ ಕಟ್ಟಡಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ.