ನವದೆಹಲಿ [ಸೆ.23]: ಫ್ರಾನ್ಸ್‌ನಿಂದ ಖರೀದಿಸುತ್ತಿರುವ 36 ರಫೇಲ್‌ ಯುದ್ಧ ವಿಮಾನಗಳ ಪೈಕಿ ಮೊದಲನೆಯದ್ದು ಅ.8ರಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗುತ್ತಿರುವಾಗಲೇ, ಇನ್ನೂ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವವನ್ನು ನರೇಂದ್ರ ಮೋದಿ ಸರ್ಕಾರ ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ. ಈ ಕುರಿತಾದ ಒಪ್ಪಂದಕ್ಕೆ 2020ರ ಆರಂಭದಲ್ಲಿ ಸಹಿ ಬೀಳಲಿದೆ ಎಂದು ವರದಿಗಳು ತಿಳಿಸಿವೆ.

ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದ್ದು, ಅದರಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸುವುದರೊಂದಿಗೆ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. 36 ವಿಮಾನಗಳ ಪೈಕಿ ಮೊದಲನೆಯದ್ದನ್ನು ಡಸಾಲ್ಟ್‌ ಏವಿಯೇಷನ್‌ ಕಂಪನಿ ವಾಯುಪಡೆಗೆ ಹಸ್ತಾಂತರ ಮಾಡಿದೆ. ಅ.8ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸಮ್ಮುಖ ಅಧಿಕೃತ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

ಇದೀಗ ಇನ್ನೂ 36 ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಉದ್ದೇಶಿಸಿದ್ದು, ಇದರೊಂದಿಗೆ ಭಾರತೀಯ ವಾಯುಪಡೆಯಲ್ಲಿನ ಬತ್ತಳಿಕೆ ಸೇರುವ ರಫೇಲ್‌ ವಿಮಾನಗಳ ಸಂಖ್ಯೆ 72ಕ್ಕೇರಿಕೆಯಾಗಲಿದೆ. ಏತನ್ಮಧ್ಯೆ, ರಫೇಲ್‌ ಬದಲಿಗೆ ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿಯ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ ಎಂದು ಹೇಳಲಾಗಿದೆ. ಆದರೆ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಹೊಡೆದುರುಳಿಸುವುದರೊಂದಿಗೆ ಅಮೆರಿಕ ವಿಮಾನಯಾನ ಕಂಪನಿಯ ಪ್ರತಿಷ್ಠೆ ಕುಂದುಂಟಾಗಿದೆ ಎಂದು ಹೇಳಲಾಗಿದೆ.