ಭಿಕರವಾದ ಬಸ್ ಅಪಘಾತದಲ್ಲಿ ಮೂವರು ದುರ್ಮರಣವನ್ನಪ್ಪಿದ್ದಾರೆ. ಅಲ್ಲದೇ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.  

ತಾಳಿಕೋಟೆ : ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ಬಸ್‌ ದುರಂತದಲ್ಲಿ ಒಂದು ಮಗು ಸೇರಿದಂತೆ ಮೂವರು ಸಾವಿಗೀಡಾಗಿ, 40ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಗುರುವಾರ ಸಂಜೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಸಮೀಪದ ಕೊಣ್ಣೂರ ಕ್ರಾಸ್‌ ಬಳಿ ಸಂಭವಿಸಿದೆ.

ತಾಳಿಕೋಟೆ ಪಟ್ಟಣದ ನಿವಾಸಿ, ಕೊಣ್ಣೂರ ನಿವಾಸಿ ಕೆನರಾ ಬ್ಯಾಂಕ್‌ ಉದ್ಯೋಗಿ ವಿನೋದ ಬಾಕಲಿ (28), ಬಸವನ ಬಾಗೇವಾಡಿ ತಾಲೂಕು ಮಸಬಿನಾಳದ ಬಾಲಕಿ ಅಮೃತಾ ಚಂದ್ರಶೇಖರ ಯಳಮೇಲಿ (4), ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಸದಗ ಗ್ರಾಮದ ಮಾನಪ್ಪ ಚೌದರಿ(48) ಮೃತಪಟ್ಟವರು. ಘಟನೆಯಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ದುರ್ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ, ಬಸವನ ಬಾಗೇವಾಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ತುರ್ತು ಚಿಕಿತ್ಸೆ ದೊರಕಿಸುವ ವ್ಯವಸ್ಥೆ ಮಾಡಲಾಯಿತು. ನಾಲ್ವರು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ವಿವರ: ಬಸ್ಸು ಮೀರಜ್‌, ಹೂವಿನಹಿಪ್ಪರಗಿ ಮಾರ್ಗವಾಗಿ ತಾಳಿಕೋಟೆಗೆ ಬರುವಾಗ ಕೊಣ್ಣೂರ ಕ್ರಾಸ್‌ ಬಳಿ ಎದುರುಗಡೆಯಿಂದ ಮರಳು ತುಂಬಿದ ಟಿಪ್ಪರ್‌ ಬರುತ್ತಿತ್ತು. ಏಕಾಏಕಿ ಟಿಪ್ಪರ್‌ ಟೈರ್‌ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದೆ. ಆಗ ಬಸ್ಸನ್ನು ಚಾಲಕ ಪಕ್ಕಕ್ಕೆ ಸರಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಮೇಲೆಯೇ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.