ನವದೆಹಲಿ (ಡಿ. 26): ಅಂಡಮಾನ್‌ ವ್ಯಾಪ್ತಿಗೆ ಸೇರಿದ ಮೂರು ದ್ವೀಪಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಅಂಡಮಾನ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಮೂರು ದ್ವೀಪಗಳಿಗೆ ಹೊಸ ಹೆಸರು ನಾಮಕರಣ ಮಾಡಲಾಗುವುದು.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಅಂಡಮಾನ್‌ಗೆ ಭೇಟಿ ನೀಡಿದ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಭಾನುವಾರ ಪೋರ್ಟ್‌ಬ್ಲೇರ್‌ಗೆ ತೆರಳಲಿದ್ದು, ಅಂದು ರೋಸ್‌ ಐಲ್ಯಾಂಡ್‌ನ ಹೆಸರನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಐಲ್ಯಾಂಡ್‌ ಎಂದೂ, ಹ್ಯಾವ್‌ಲಾಕ್‌ ದ್ವೀಪದ ಹೆಸರನ್ನು ಸ್ವರಾಜ್‌ ಎಂದೂ, ನೀಲ್‌ ಐಲ್ಯಾಂಡ್‌ ಹೆಸರನ್ನು ಶಹೀದ್‌ ಐಲ್ಯಾಂಡ್‌ ಎಂದೂ ಮರುನಾಮಕರಣ ಮಾಡಲಾಗುವುದು.

1943ರ ಡಿ.30ರಂದು ಪೋರ್ಟ್‌ಬ್ಲೇರ್‌ನ ಜಿಮ್ಕಾನಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದ ಸುಭಾಷ್‌ ಚಂದ್ರ ಬೋಸ್‌, ಇದು ಬ್ರಿಟೀಷರ ಆಡಳಿತದಿಂದ ಮುಕ್ತವಾದ ಮೊದಲ ಭಾಗ ಎಂದು ಘೋಷಿಸಿದ್ದರು. ಇದೇ ವೇಳೆ ಅವರು ಅಂಡಮಾನ್‌ ದ್ವೀಪವನ್ನು ಶಹೀದ್‌ ಎಂದೂ, ನಿಕೋಬಾರ್‌ ದ್ವೀಪವನ್ನು ಸ್ವರಾಜ್‌ ಎಂದೂ ಘೋಷಿಸಿದ್ದರು.