ಈವರೆಗೆ 12 ಗಂಟೆಗಳ ಕಾಲ ಲಭ್ಯವಿದ್ದ ಸಹಾಯವಾಣಿ ಹಿರಿಯರಿಂದ 1.6 ಲಕ್ಷ ಕರೆಗಳ ಸ್ವೀಕಾರ: ಡಾ. ರಾಧಾ

ದೇಶದಲ್ಲೇ ಪ್ರಥಮ ಬಾರಿಗೆ 2002ರಲ್ಲಿ ಆರಂಭವಾಗಿರುವ ನಗರ ಪೊಲೀಸ ಆಯುಕ್ತರ ಕಚೇರಿ ಆವರಣದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಸೇವೆ ಇನ್ನು ಮುಂದೆ ದಿನದ 24 ಗಂಟೆಯೂ ಲಭ್ಯವಾಗಲಿದೆ.
ಹಿರಿಯ ನಾಗರಿಕರ 24 ಗಂಟೆಗಳ ಸಹಾಯವಾಣಿ ಸೇವೆಯನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಉದ್ಘಾಟಿಸಲಿದ್ದಾರೆ.

ನಗರ ಪೊಲೀಸ್‌ ಇಲಾಖೆ ಹಾಗೂ ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ ಸಹಯೋಗದಲ್ಲಿ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತಿದೆ. ಬುಧವಾರದಿಂದ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ ವ್ಯವಸ್ಥಾಪಕಿ ಡಾ.ರಾಧಾ ಎನ್‌.ಮೂರ್ತಿ ಹೇಳಿದರು.

ಬೆಂಗಳೂರಿನಲ್ಲಿ 10 ಲಕ್ಷ ಹಿರಿಯ ನಾಗರಿಕರಿದ್ದು, 3 ಲಕ್ಷ ಮಂದಿ ಒಂದಲ್ಲ ಒಂದು ರೀತಿಯಲ್ಲಿ ದೈಹಿಕ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಿರಿಯ ನಾಗರಿಕರ ಮೇಲಿನ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಹಲವಾರು ಸಂದರ್ಭಗಳಲ್ಲಿ ನೆರೆ ಹೊರೆಯವರ ಸಹಾಯವು ಸಿಗದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಿರಿಯ ನಾಗರೀಕರ ರಕ್ಷಣೆ ಸಲುವಾಗಿ ದಿನದ 24 ಗಂಟೆಗಳಿಗೆ ಸಹಾಯವಾಣಿ ಸೇವೆಯನ್ನು ವಿಸ್ತರಿಸಲಾಗಿದೆ. 15 ವರ್ಷಗಳಲ್ಲಿ 1.6 ಲಕ್ಷ ಕರೆಗಳನ್ನು ಸ್ವೀಕರಿಸಿದ್ದು, 8,662 ಗಂಭೀರ ಪ್ರಕರಣಗಳು ದಾಖಲಾಗಿವೆ. ಆಪ್ತ ಸಮಾಲೋಚಕರು, ಸಮಾಜ ಕಾರ್ಯಕರ್ತರು ನುರಿತ ವಕೀಲರು ಮತ್ತು ಪೋಲಿಸ್‌ ಸಹಾಯದಿಂದ ಶೇ.52ರಷ್ಟುದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರೀಕ ಸಹಾಯವಾಣಿ 1090 (ದರರಹಿತ ಕರೆ) ಹಾಗೂ 080 22943226 ಸಂಪರ್ಕಿಸಬಹುದು.

(ಸಾಂದರ್ಭಿಕ ಚಿತ್ರ)