ಕಾರು ಕೊಳ್ಳುವಷ್ಟು ಆದಾಯವಿರುವ ಜನರ ಪೈಕಿ ಬಹುತೇಕ ಮಂದಿ ತಮ್ಮ ಆದಾಯವನ್ನು ಘೋಷಣೆ ಮಾಡಿಕೊಳ್ಳುತ್ತಿಲ್ಲವೆಂಬುದು ಈ ಅಂಕಿ-ಅಂಶದಿಂದ ವೇದ್ಯವಾಗುತ್ತಿದೆ.

ನವದೆಹಲಿ(ಡಿ. 27): ಭಾರತದಲ್ಲಿ ತಮ್ಮ ಆದಾಯಕ್ಕೆ ತೆರಿಗೆ ಪಾವತಿಸುವ ಜನರ ಪ್ರಮಾಣ ಬರೀ ಕೇವಲ 3.65 ಕೋಟಿ ಮಂದಿ ಮಾತ್ರವಂತೆ. ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿರುವ ಜನರ ಪ್ರಮಾಣವಂತೂ ಬರೀ 24.5 ಲಕ್ಷ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಕಳೆದ 5 ವರ್ಷಗಳಿಂದ ವರ್ಷಂಪ್ರತಿ 25 ಲಕ್ಷ ಹೊಸ ಕಾರುಗಳ ಮಾರಾಟವಾಗುತ್ತಿರುವ ಸಂಗತಿ ಬಹಳ ಅಚ್ಚರಿ ಮೂಡಿಸಿದೆ.

ಇನ್ನೂ ಕುತೂಹಲದ ವಿಚಾರವೆಂದರೆ, 2014-15ರ ಸಾಲಿನಲ್ಲಿ ಐಟಿ ರಿಟರ್ನ್ ಫೈಲ್ ಮಾಡಿದ 3.65 ಕೋಟಿ ಜನರ ಪೈಕಿ ಐದೂವರೆ ಲಕ್ಷ ಮಂದಿ ಮಾತ್ರ 5 ಲಕ್ಷ ರೂ.ಗಿಂತ ಹೆಚ್ಚು ಹಣದ ಆದಾಯ ತೆರಿಗೆ ಪಾವತಿಸಿದ್ದಾರೆ. ಕೇಂದ್ರಕ್ಕೆ ಸಂದಾಯವಾಗುವ ಶೇ. 57ರಷ್ಟು ಆದಾಯ ತೆರಿಗೆ ಮೊತ್ತವು ಈ ಐದೂವರೆ ಲಕ್ಷ ಮಂದಿಯಿಂದ ಬರುತ್ತದೆ. ಅಂದರೆ, ದೇಶದ ಶೇ.1.5ರಷ್ಟು ಮಂದಿ ಶೇ.57ರಷ್ಟು ತೆರಿಗೆ ಪಾವತಿಸುತ್ತಾರೆ.

ಕಾರು ಕೊಳ್ಳುವಷ್ಟು ಆದಾಯವಿರುವ ಜನರ ಪೈಕಿ ಬಹುತೇಕ ಮಂದಿ ತಮ್ಮ ಆದಾಯವನ್ನು ಘೋಷಣೆ ಮಾಡಿಕೊಳ್ಳುತ್ತಿಲ್ಲವೆಂಬುದು ಈ ಅಂಕಿ-ಅಂಶದಿಂದ ವೇದ್ಯವಾಗುತ್ತಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತೆರಿಗೆ ಸಂಗ್ರಹ ಕಡಿಮೆಯೇ ಇದೆ. ಜಿಡಿಪಿಯ ಆಧಾರದ ಮೇಲೆ ಲೆಕ್ಕಾಚಾರ ಹಾಕಿದರೆ ಅಮೆರಿಕದಲ್ಲಿ 25.4%, ಜಪಾನ್’ನಲ್ಲಿ 30.3% ತೆರಿಗೆ ಸಂಗ್ರಹವಾಗುತ್ತದೆ. ಭಾರತದಲ್ಲಿ ಈ ಪ್ರಮಾಣ 16.7% ಮಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತೆರಿಗೆಯಿಂದ ತಪ್ಪಿಸಿಕೊಂಡಿರುವ ಸಿರಿವಂತರನ್ನು ಹೆಕ್ಕಿ ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಿದೆ.