ಅಮೆರಿಕದ ಅಭಿವೃದ್ಧಿಗೆ ಭಾರತೀಯರ ಕೊಡುಗೆ ಅಪಾರ. ಮೂಲ ಭಾರತೀಯರು ಅಲ್ಲಿನ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವುದು ಹೊಸದಲ್ಲ. ಆದರೆ, ಕೇವಲ 22 ವರ್ಷದ ಶುಭಂ ಇದೀಗ ಕ್ಯಾಲಿಫೋರ್ನಿಯಾದ ಗೌರ್ನರ್ ರೇಸ್‌ನಲ್ಲಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹೈದರಾಬಾದ್: ಭಾರತೀಯ ಮೂಲದ 22 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಅಮೆರಿಕದ ಕ್ಯಾಲಿಫೋರ್ನಿಯಾದ ಗೌರ್ನರ್‌ ಹುದ್ದೆಗಾಗಿ ಯತ್ನಿಸುತ್ತಿದ್ದು, ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಉತ್ತರ ಪ್ರದೇಶ ಮೂಲದ ಟೆಕ್ಕಿ ಶುಭಂ ಗೋಯಲ್ ಕಣದಲ್ಲಿರುವವರು. ಬೀದಿ ಬೀದಿಗಳಲ್ಲಿ ಪ್ರಚಾರ ನಡೆಸುತ್ತಿರುವ ಶುಭಮ್ ಅವರನ್ನು ಎಲ್ಲರೂ ಉಬ್ಬೇರಿಸಿಕೊಂಡು ನೋಡುತ್ತಿರುತ್ತಾರೆ. ನಾಲ್ಕು ವರ್ಷಗಳ ಎರಡು ಸೇವಾವಧಿಗಳನ್ನು ಪೂರೈಸಿರುವ ಜೆರ್ರಿ ಬ್ರೌನ್‌ ಅವರ ಸ್ಥಾನಕ್ಕೇರಲು ಶುಭಮ್ ಯತ್ನಿಸುತ್ತಿದ್ದಾರೆ. 

ಅತ್ಯಾಧುನಿಕ ವರ್ಚುಯಲ್ ತಂತ್ರಜ್ಞಾನವನ್ನು ಜನರೊಂದಿಗೆ ಸಂವಾದ ನಡೆಸಲು ಶುಭಮ್ ಬಳಸಿಕೊಳ್ಳುತ್ತಿದ್ದು, ಈ ತಂತ್ರಜ್ಞಾನವೇ ಕ್ಯಾಲಿಫೋರ್ನಿಯಾದ ಶೈಕ್ಷಣಿಕ ಸಮಸ್ಯೆ ನಿವಾರಿಸಲು ಅನುವಾಗಲಿದೆ ಎಂದು ಹೇಳುತ್ತಿದ್ದಾರೆಂದು, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಶುಭಮ್ ತಾಯಿ ಕರುಣಾ ಗೋಯಲ್ ಮೀರತ್‌ನವರಾದರೆ ತಂದೆ ವಿಪುಲ್ ಗೋಯಲ್‌ ಅವರು ತಮ್ಮದೇ ಸಾಫ್ಟ್‌ವೇರ್ ಕಂಪನಿ ಹೊಂದಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಸಿನಿಮಾ ವಿಷಯಗಳನ್ನು ಶುಭಮ್ ಅಭ್ಯಾಸ ಮಾಡಿದ್ದಾರೆ. 

ಪ್ರಸ್ತುತ ಅನೇಕ ಸಮಸ್ಯೆಗಳನ್ನು ಬಗಹರಿಸಲು ಹೊಸ ತಂತ್ರಜ್ಞಾನಗಳು ನೆರವಾಗಲಿದೆ ಎಂದು ಬಲವಾಗಿ ನಂಬಿರುವ ಶುಭಮ್, ಕಳೆದವ ವರ್ಷವಷ್ಟೇ ಪದವಿ ಪೂರೈಸಿದ್ದು, ಅಕ್ಟೋಬರ್‌ನಿಂದ ವೃತ್ತಿ ಬದುಕು ಆರಂಭಿಸಿದ್ದಾರೆ.

ಆಧುನಿಕ ತಂತ್ರಜ್ಞಾನ ಹೊರತು ಪಡಿಸಿಯೂ, ವಿವಿಧ ವಿಷಯಗಳ ಬಗ್ಗೆಯೂ ಪ್ರಬುದ್ಧವಾಗಿ ಮಾತನಾಡುವ ಶುಭಮ್ ವಿವಿಧ ಶಾಲಾ ಕಾಲೇಜುಗಳಲ್ಲಿಯೂ ಭಾಷಣ ಮಾಡಿದ್ದಾರೆ.