ನವದೆಹಲಿ :  ಲೋಕಸಭೆ ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕೆಲವು ಮಾಧ್ಯಮ ಸಮೂಹಗಳು ಚುನಾವಣಾಪೂರ್ವ ಸಮೀಕ್ಷೆಗಳನ್ನು ನಡೆಸಿದ್ದು, ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೇಲುಗೈ ಸಾಧಿಸಿದೆ.

ರಿಪಬ್ಲಿಕ್‌ ಟೀವಿ-ಸಿ ವೋಟರ್‌ ಜಂಟಿ ಸಮೀಕ್ಷೆಯಲ್ಲಿ 543 ಸ್ಥಾನಗಳ ಪೈಕಿ ಎನ್‌ಡಿಎ 264 ಕ್ಷೇತ್ರ ಜಯಿಸಲಿದೆ ಎಂದು ತಿಳಿಸಲಾಗಿದ್ದು, ಯುಪಿಎ 141 ಹಾಗೂ ಇತರರು 138 ಕ್ಷೇತ್ರ ಪಡೆಯಲಿದ್ದಾರೆ. ಎನ್‌ಡಿಎಗೆ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್‌ ಸಂಖ್ಯೆ 272ಕ್ಕೆ 8 ಕ್ಷೇತ್ರಗಳ ಕೊರತೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಸಮೀಕ್ಷೆಯಲ್ಲಿ ಎನ್‌ಡಿಎ 285 ಸ್ಥಾನ ಪಡೆದು ನಿಚ್ಚಳ ಬಹುಮತ ಸಾಧಿಸಿದೆ. ಯುಪಿಎ    126 ಹಾಗೂ ಇತರರು 132 ಸ್ಥಾನಗಳಲ್ಲಿ ಜಯಿಸಲಿದ್ದಾರೆ.

2014ರ ಲೋಕಸಭೆ ಚುಣಾವಣೆಯಲ್ಲಿ ಎನ್‌ಡಿಎ 355, ಯುಪಿಎ 80 ಹಾಗೂ ಇತರರು 108 ಸ್ಥಾನ ಪಡೆದಿದ್ದರು.


ಕೂಟ    ರಿಪಬ್ಲಿಕ್‌ ಟೀವಿ-ಸಿ ವೋಟರ್‌    ಇಂಡಿಯಾ ಟೀವಿ-ಸಿಎನ್‌ಎಕ್ಸ್‌

ಎನ್‌ಡಿಎ    264    285

ಯುಪಿಎ    141    126

ಇತರ    138    132

ಕರ್ನಾಟಕದಲ್ಲೂ ಬಿಜೆಪಿ ಮೇಲುಗೈ - ರಿಪಬ್ಲಿಕ್‌ ಟೀವಿ, ವಿಡಿಪಿಎ ಸಮೀಕ್ಷೆ

 ಏಪ್ರಿಲ್‌ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ರಿಪಬ್ಲಿಕ್‌ ಟೀವಿ-ಸಿ ವೋಟರ್‌ ಹಾಗೂ ವಿಡಿಪಿ ಅಸೋಸಿಯೇಟ್ಸ್‌ ಸಮೀಕ್ಷೆಗಳು ಹೇಳಿವೆ.

ಬಿಜೆಪಿ 16, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ 12 ಸ್ಥಾನಗಳನ್ನು ಗಳಿಸಲಿವೆ. ಇತರರು ಶೂನ್ಯ ಸಂಪಾದಿಸಲಿದ್ದಾರೆ ಎಂದು ರಿಪಬ್ಲಿಕ್‌ ಟೀವಿ ಸಮೀಕ್ಷೆ ತಿಳಿಸಿದೆ. ಇನ್ನು ಶೇಕಡಾವಾರು ಮತದಲ್ಲಿ ಬಿಜೆಪಿ ಶೇ.46.4 ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಕೂಟ ಶೇ.46.3 ಮತ ಪಡೆಯಲಿವೆ. ಇತರರು ಶೇ.7.3 ಮತ ಗಳಿಸಲಿದ್ದಾರೆ.

ವಿಡಿಪಿ ಅಸೋಸಿಯೇಟ್ಸ್‌ ಸಮೀಕ್ಷೆಯಲ್ಲಿ ಬಿಜೆಪಿ 15 ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಕೂಟ 13ರಲ್ಲಿ ಗೆಲ್ಲಲಿವೆ. ಉಭಯ ಕೂಟಗಳು ಕ್ರಮವಾಗಿ ಶೇ.46 ಹಾಗೂ ಶೇ.48 ಮತಗಳನ್ನು ಪಡೆಯಲಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್‌ 9 ಹಾಗೂ ಜೆಡಿಎಸ್‌ 2 ಸ್ಥಾನ ಪಡೆದಿದ್ದವು.

ಕರ್ನಾಟಕದಲ್ಲಿ

ಪಕ್ಷ    ರಿಪಬ್ಲಿಕ್‌    ವಿಡಿಪಿಎ

ಬಿಜೆಪಿ    16    15

ಕಾಂಗ್ರೆಸ್‌-ಜೆಡಿಎಸ್‌    12    13