1983 ರಲ್ಲಿ ಜನ್ಮ ನೀಡಿ, 2006ರಲ್ಲಿ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ತಮ್ಮ ಚುನಾವಣಾ ಸ್ಪರ್ಧೆಯ ಬಗ್ಗೆ ಈವರೆಗಿದ್ದ ಕುತೂಹಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ಮೈಸೂರು: 1983 ರಲ್ಲಿ ಜನ್ಮ ನೀಡಿ, 2006ರಲ್ಲಿ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ತಮ್ಮ ಚುನಾವಣಾ ಸ್ಪರ್ಧೆಯ ಬಗ್ಗೆ ಈವರೆಗಿದ್ದ ಕುತೂಹಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ಮಂಗಳವಾರ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೆನಾದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಇನ್ನೊಂದು ಬಾರಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. 2018ರ ವಿಧಾನಸಭಾ ಚುನಾವಣೆಯೇ ನನಗೆ ಕೊನೆಯದು ಎಂದು ಹೇಳಿದರು.
ಕ್ಷೇತ್ರ ತೊರೆವಾಗ ಕಣ್ಣೀರು: ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ರೇವಣಸಿದ್ದಯ್ಯ ಅವರು ಬಿಜೆಪಿಗೆ ಹೋದ ಕಾರಣ 2008ರ ಚುನಾವಣೆಯಲ್ಲಿ ನಾನು ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು.
ಇಲ್ಲದಿದ್ದರೆ ನಾನು ಚಾಮುಂಡೇಶ್ವರಿ ಯಿಂದಲೇ ಸ್ಪರ್ಧಿಸಿ, ಅವರಿಗೆ ವರುಣ ಬಿಟ್ಟುಕೊಡುತ್ತಿದ್ದೆ. ನನ್ನ ತಂದೆ, ತಾಯಿ ತೀರಿಕೊಂಡ ಸಂದರ್ಭದಲ್ಲೂ ನಾನು ಕಣ್ಣೀರು ಹಾಕಿರಲಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರ ಬಿಡುವಾಗ ನನಗೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದೆ ಎಂದು ತಿಳಿಸಿದರು.
1999ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಕೆಲವು ಸ್ನೇಹಿತರ ಮೇಲಿಟ್ಟಿದ್ದ ನಂಬಿಕೆಯೇ ಹೊರತು ಜನರ ತಪ್ಪಿನಿಂದಲ್ಲ. ಈಗ ಮತ್ತೊಮ್ಮೆ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಲೂ ಈ ಕ್ಷೇತ್ರದ ಜನ ಆಶೀರ್ವಾದ ಮಾಡಬೇಕೆಂದು ಅವರು ಕೋರಿದರು. ಈ ವೇಳೆ ಕಾರ್ಯಕರ್ತರು ಕೈ ಎತ್ತಿ ಸ್ವಾಗತಿಸಿದರು. ಹಿಂದೆ ಅಧಿಕಾರದಲ್ಲಿದ್ದ ಯಡಿಯೂರಪ್ಪ ಜನರಿಗೆ ನೀಡಿದ್ದು ಎರಡೇ. ಒಂದು ಸೈಕಲ್, ಒಂದು ಸೀರೆ. ಅದು ಬಿಟ್ಟರೆ ಹಗರಣ, ಭ್ರಷ್ಟಾಚಾರವೇ ಜಾಸ್ತಿ. ಜನರಿಗೆ ಸೈಕಲ್, ಸೀರೆ ಕೊಟ್ಟರೆ ಸಾಕಾ? ನಾವು ಹಲವಾರು ಭಾಗ್ಯಗಳನ್ನು ನೀಡಿದ್ದೇವೆ ಎಂದರು.
ಸಿಎಂ ಒಂದೇ ದಿನ ವಿಭಿನ್ನ ಹೇಳಿಕೆ: ಚಾಮುಂಡೇಶ್ವರಿ ಕ್ಷೇತ್ರದ ಸಮಾವೇಶದ ವೇದಿಕೆಯಲ್ಲಿ ಮಾತನಾಡುವ ಸಂದರ್ಭ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದಿದ್ದರು. ಅದಕ್ಕಿಂತ ಮೊದಲು ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಅಂಗವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇವತ್ತು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತಿದೆ. ಈ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಹೈಕಮಾಂಡ್ ಹೇಳಿದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.
