ನವದೆಹಲಿ: ಮೋದಿಕೇರ್‌ ಎಂದೇ ಜನಪ್ರಿಯಗೊಂಡಿರುವ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್‌ ಭಾರತ್‌ಗೆ ಸಂಬಂಧಿಸಿದ ಒಪ್ಪಂದಕ್ಕೆ 20 ರಾಜ್ಯಗಳು ಸಹಿ ಹಾಕಿವೆ. ಹೀಗಾಗಿ ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ ಯಶಸ್ವಿಯತ್ತ ಸಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವರುಗಳ ಸಮಾವೇಶದಲ್ಲಿ ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ್ದಾರೆ.

ಇನ್ನುಳಿದ ಐದು ರಾಜ್ಯಗಳು ಈ ತಿಂಗಳೊಳಗೆ ಸಹಿ ಮಾಡಲಿವೆ. ಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಕೆಲವು ಎನ್‌ಡಿಎಯೇತರ ರಾಜ್ಯಗಳು ಕೇಂದ್ರದ ಈ ಯೋಜನೆ ಬೆಂಬಲಿಸುವುದಿಲ್ಲ. ತಮ್ಮದೇ ರಾಜ್ಯಗಳಲ್ಲಿ ಇಂತಹುದೇ ಯೋಜನೆಗಳು ಈಗಾಗಲೇ ಇವೆ ಎಂದು ಹೇಳಿದ್ದವು.

ಆದರೆ, ಈಗಾಗಲೇ ಶೇ.90ರಷ್ಟುಫಲಾನುಭವಿಗಳ ದತ್ತಾಂಶ ಪರಿಶೀಲನೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕೆಲವು ರಾಜ್ಯಗಳಲ್ಲಿ ಗುರುತಿಸಲ್ಪಟ್ಟಆಸ್ಪತ್ರೆಗಳಲ್ಲಿ ಯೋಜನೆ ಕಾರ್ಯಗತಗೊಳಿಸಬಹುದಾದ ನಿರೀಕ್ಷೆಯಿದೆ. ದೇಶದ ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ತಲಾ 5 ಲಕ್ಷ ರು. ವಿಮಾ ಸೌಲಭ್ಯ ನೀಡುವುದು ಆಯುಷ್ಮಾನ್‌ ಭಾರತ್‌ ಯೋಜನೆಯ ಉದ್ದೇಶವಾಗಿದೆ.