ಬೆಂಗಳೂರು[ಸೆ.12]: ಕಳೆದ ಹಣಕಾಸು ಸಾಲಿನ ಇದೇ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ವರ್ಷ ತೆರಿಗೆ ಸಂಗ್ರಹಣೆ ಪ್ರಮಾಣ ಶೇ.20.3ರಷ್ಟುಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪ್ರಮುಖ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ ಇಲಾಖೆ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿ ಈ ವಿವರ ನೀಡಿದರು.

ರಾಜ್ಯದಲ್ಲಿ ಈ ವರ್ಷದ ತೆರಿಗೆ ಸಂಗ್ರಹ ಗುರಿ 76,046 ಕೋಟಿ ರು.ಆಗಿದೆ. ಈವರೆಗೆ 33,618 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಇದು ವಾರ್ಷಿಕ ಗುರಿಯ ಶೇ.44.2ರಷ್ಟುಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20.3ರಷ್ಟುಹೆಚ್ಚಳವಾಗಿದೆ. 2019-20ನೇ ಸಾಲಿನ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ.20.3ರಷ್ಟುಹೆಚ್ಚು ತೆರಿಗೆ ಸಂಗ್ರಹವಾಗಿದೆ. ಜತೆಗೆ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿಯೂ ಶೇ. 14.3ರಷ್ಟುಬೆಳವಣಿಗೆ ಆಗಿದೆ ಎಂದು ಹೇಳಿದರು.

ಜಿಎಸ್‌ಟಿ ಜಾರಿಗೊಂಡಾಗ 4.51 ಲಕ್ಷ ಮಂದಿ ಮತ್ತು ಕಂಪನಿಗಳು ನೋಂದಾಯಿಸಿಕೊಂಡಿದ್ದವು. ಪ್ರಸ್ತುತ 8,16,573 ನೋಂದಣಿಯಾಗಿದ್ದು, ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ ಶೇ.100ರಷ್ಟುಹೆಚ್ಚಳವಾಗಿದೆ. ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದ್ದು, ವ್ಯಾಪಾರದ ಸ್ಥಳಕ್ಕೆ ಭೇಟಿ ನೀಡಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಲೈಸನ್ಸ್‌ಗಳನ್ನು ರದ್ದು ಮಾಡಲಾಗಿದೆ. ನಿಯಮಿತ ತಪಾಸಣೆಯಿಂದ ಇ-ವೇ ಬಿಲ್ಲುಗಳ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ನಡೆಸುವ ಮೂಲಕ, ತೆರಿಗೆ ಸಂಗ್ರಹಣೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಸಾಲಿನಲ್ಲಿ 44 ಲಕ್ಷ ಇ-ವೇ ಬಿಲ…ಗಳನ್ನು ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.

ಆರ್ಥಿಕ ಹಿಂಜರಿತದಿಂದ ಸ್ವಲ್ಪ ಹಿನ್ನಡೆಯಾಗಿದ್ದರೂ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಜಾರಿ ಮತ್ತು ಜಾಗೃತಿ ವಿಭಾಗಗಳನ್ನು ಬಲಪಡಿಸಲು ಮತ್ತು ತೆರಿಗೆ ಸೋರಿಕೆ ತಡೆಯಲು ಕ್ರಮಕೈಗೊಳ್ಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಒಟ್ಟಾರೆ ಬೆಳವಣಿಗೆ ಶೇ.14.16ರಷ್ಟಿದ್ದು, ಇತರ ರಾಜ್ಯಗಳಿಗಿಂತ ಉತ್ತಮ ಬೆಳವಣಿಗೆ ಆಗಿದೆ ಎಂದರು.

ವಾಹನ ನೋಂದಣಿ ಕುಸಿತ

ಸಾರಿಗೆ ಇಲಾಖೆ ಹಾಗೂ ಸಾರಿಗೆ ನಿಗಮಗಳ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 7100 ಕೋಟಿ ರು.ಗಳಷ್ಟಿದ್ದು, ಆ.30ರವರೆಗೆ 2750.82 ಕೋಟಿ ರು. ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 2476 ಕೋಟಿ ರು. ತೆರಿಗೆ ಸಂಗ್ರವಾಗಿದ್ದು, ತೆರಿಗೆ ಸಂಗ್ರಹ ನಿಗದಿತ ಗುರಿಯ ಶೇ.90ರಷ್ಟಾಗಿದೆ. ವಾಹನ ಮಾರಾಟದಲ್ಲಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ.10.34 ರಷ್ಟುಕಡಿಮೆಯಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ ಎಂದು ಇದೇ ವೇಳೆ ಯಡಿಯೂರಪ್ಪ ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 11,828 ಕೋಟಿ ರು.ಗಳಷ್ಟಿದೆ. ಆ.30ರವರೆಗೆ 4620.30 ಕೋಟಿ ರು.ತೆರಿಗೆ ಸಂಗ್ರಹವಾಗಿದ್ದು, ಶೇ.101.1ರಷ್ಟುಗುರಿ ಮುಟ್ಟಲಾಗಿದೆ. ಕಳೆದ ವರ್ಷಕ್ಕಿಂತ ಬೆಂಗಳೂರಿನಲ್ಲಿ ಶೇ.3.86ರಷ್ಟುಹೆಚ್ಚಳವಾಗಿದೆ ಎಂದರು.

ಮಲೇಷಿಯಾ ಮರಳು ಖರೀದಿ ಬಂದ್‌

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ 2019-20ನೇ ಸಾಲಿಗೆ 3550 ಕೋಟಿ ರು. ರಾಜಸ್ವ ಸಂಗ್ರಹ ಗುರಿ ಇತ್ತು. ಅದರಲ್ಲಿ ಒಟ್ಟು 1314 ಕೋಟಿ ರು. ಅಂದರೆ ಶೇ.37 ರಷ್ಟುರಾಜಸ್ವ ಸಂಗ್ರಹ ಆಗಿದೆ. ರಾಜ್ಯದಲ್ಲಿ ಮರಳು ಮಾಫಿಯಾ ಮಟ್ಟಹಾಕಿ ಜನಸಾಮಾನ್ಯರಿಗೆ ಸುಲಭ ದರದಲ್ಲಿ ಮರಳು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಹಿಂದಿನ ಸರ್ಕಾರ ಮಲೇಷಿಯಾ ಮರಳು ಖರೀದಿಗೆ ನಿರ್ಧರಿಸಿದ್ದನ್ನು ಟೀಕಿಸುವುದಿಲ್ಲ. ಆದರೆ ಮಲೇಷಿಯಾ ಮರಳನ್ನು ಇನ್ನು ಮುಂದೆ ಖರೀದಿ ಮಾಡದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.