ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಚಾರವಾಗಿ ಬಿಹಾರದ ನ್ಯಾಯಾಲಯವೊಂದು 20 ಮಂದಿಗೆ ಕಠಿಣ ಶಿಕ್ಷೆ  ವಿಧಿಸಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ 2 ರಿಂದ 7 ವರ್ಷವರೆಗಿನ ಜೈಲು ಶಿಕ್ಷೆ ವಿಧಿಸಿದೆ. 
2018ರ ಆಗಸ್ಟ್ ತಿಂಗಳಿನಲ್ಲಿ 19 ವರ್ಷದ ಯುವಕನೊಬ್ಬನನ್ನು ಹತ್ಯೆಗೈದಿರುವ ಶಂಕೆಯ ಮೆರೆಗೆ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರದಂದು ತೀರ್ಪು ನೀಡಿರುವ ನ್ಯಾಯಾಧೀಶ ರಮೇಶ್ ಚಂದ್ರ ದ್ವಿವೇದಿ 20 ಮಂದಿ ಅಪರಾಧಿಗಳಲ್ಲಿ ಐವರಿಗೆ 7 ವರ್ಷ ಹಾಗೂ 15 ಮಂದಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಇವರೆಲ್ಲರನ್ನೂ ನವೆಮಬರ್ 28 ರಂದು ದೋಷಿಗಳೆಂದು ಘೋಷಿಸಲಾಗಿತ್ತು. 

ಈ ಘಟನೆಯು ಆಗಸ್ಟ್ 20 ರಂದು ಬಿಹಿಯಾಂದ ರೈಲ್ವೇ ಹಳಿ ಬಳಿಯ ರೆಡ್ ಲೈಟ್ ಪ್ರದೇಶದಲ್ಲಿ ನಡೆದಿತ್ತು. ಇಲ್ಲಿ ವಿಮಲೇಶ್ ಸಾಹ್ ಎಂಬವರ ಮೃತದೇಹವು ನಾಪತ್ತೆಯಾದ ಒಂದು ದಿನದ ಬಳಿಕ ಪತ್ತೆಯಾಗಿತ್ತು. ರೆಡ್ ಲೈಟ್ ಆಸುಪಾಸಿನ ನಿವಾಸಿಗರು ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಇದನ್ನು ಹೊರತುಪಡಿಸಿ ನೆರೆದಿದ್ದ ಜನರು ಸೇರಿ ಅಲ್ಲಿದ್ದ ದಲಿತ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ, ಆಕೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ್ದರು. ಈ ವಿಚಾರವನ್ನು ಹಲವಾರು ಮಂದಿ ಖಂಡಿಸಿದ್ದರು.

ಸದ್ಯ 20 ಅಪರಾಧಿಗಳಲ್ಲಿ 7 ವರ್ಷ ಜೈಲು ಶಿಕ್ಷೆಗೊಳಗಾದವರಿಗೆ ತಲಾ 10 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.