ಬೆಂಗಳೂರು :  ದೇಶದೊಳಗೆ ಅಕ್ರಮವಾಗಿ ನುಸುಳಿ ಅತ್ಯಾಚಾರ ಹಾಗೂ ಡಕಾಯಿತಿ ಕೃತ್ಯಗಳನ್ನು ಎಸಗುತ್ತಿದ್ದ ಕುಖ್ಯಾತ ‘ಬಾಂಗ್ಲಾ ಗ್ಯಾಂಗ್‌’ನ ಇಬ್ಬರು ಡಕಾಯಿತರಿಗೆ ಕೆ.ಆರ್‌.ಪುರ ಠಾಣೆ ಪೊಲೀಸರು ಬಂದೂಕಿನ ಮೂಲಕ ಉತ್ತರ ಕೊಟ್ಟಿದ್ದಾರೆ.

ಬಾಂಗ್ಲಾದೇಶದ ಮುನೀರ್‌ ಹಾಗೂ ಮಿಲನ್‌ ಗುಂಡಿನ ದಾಳಿಗೊಳಗಾಗಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮುನೀರ್‌ ಅಣ್ಣ ಕೊಕನ್‌ನನ್ನು ಗುಂಡಿನ ದಾಳಿ ನಡೆಸಿ ದೆಹಲಿ ಪೊಲೀಸರು ಬಂಧಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಮುನೀರ್‌, ತನ್ನ ಸಹಚರ ಜತೆ ಬೆಂಗಳೂರಿಗೆ ಆಗಮಿಸುವ ವಿಚಾರವು ಕೆ.ಆರ್‌.ಪುರ ಪೊಲೀಸರಿಗೆ ತಿಳಿಯಿತು. ಈ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಇಮ್ಮಡಿಹಳ್ಳಿ-ಅಜ್ಜಗೊಂಡಹಳ್ಳಿ ರಸ್ತೆಯಲ್ಲಿ ಆರೋಪಿಗಳನ್ನು ಬಂಧನಕ್ಕೆ ಮುಂದಾಗಿದ್ದರು. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್‌ಪೆಕ್ಟರ್‌ ಜಯರಾಜ್‌ ನೇತೃತ್ವದ ತಂಡವು ಗುಂಡಿನ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಖ್ಯಾತ ಬಾಂಗ್ಲಾ ಗ್ಯಾಂಗ್‌:

ಬಾಂಗ್ಲಾದೇಶದ ಮುನೀರ್‌, ಮಿಲನ್‌ನ ಕುಟುಂಬದ ಸದಸ್ಯರೆಲ್ಲ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ದಶಕಗಳ ಹಿಂದೆಯೇ ಭಾರತದೊಳಗೆ ನುಸುಳಿದ ಈ ಗ್ಯಾಂಗ್‌, ದೆಹಲಿ, ಗೋವಾ ಹಾಗೂ ಉತ್ತರಪ್ರದೇಶದಲ್ಲಿ ಹಾವಳಿ ಇಟ್ಟಿತ್ತು. ನಾಗರಿಕರ ನಿದ್ದೆಗೆಡಿಸಿದ್ದ ಬಾಂಗ್ಲಾ ಗ್ಯಾಂಗ್‌ ವಿರುದ್ಧ ಆ ಮೂರು ರಾಜ್ಯಗಳ ಪೊಲೀಸರು ಬೆನ್ನಹತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೋವಾದಲ್ಲಿ ಅತ್ಯಾಚಾರ ಕೇಸ್‌:

2002ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಮುನೀರ್‌ನನ್ನು ಉತ್ತರಪ್ರದೇಶದ ನೋಯಿಡಾ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಆತ, ಮತ್ತೆ ತನ್ನ ದುಷ್ಕೃತ್ಯಗಳನ್ನು ಮುಂದುವರಿಸಿದ್ದ. ಮನೆಯವರು ಪ್ರತಿರೋಧಿಸಿದ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ನಗ-ನಾಣ್ಯ ದೋಚುತ್ತಿದ್ದರು.

ಇದೇ ಜೂನ್‌ನಲ್ಲಿ ಗೋವಾದ ಮಡಂಗಾವ್‌ನಲ್ಲಿ ಒಂಟಿ ಮನೆಗೆ ನುಗ್ಗಿದ್ದರು. ಬಳಿಕ ಅಕ್ಟೋಬರ್‌ನಲ್ಲಿ ಪೋಂಡಾದ ಬಂಗಲೆಗೆ ನುಗ್ಗಿ 900 ಗ್ರಾಂ ಚಿನ್ನಾಭರಣ ಹಾಗೂ .3 ಲಕ್ಷ ನಗದು ದೋಚಿದ್ದರು. ಈ ವೇಳೆ ಮನೆಯೊಡತಿ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ನ.24ರಂದು ಮುನೀರ್‌ನ ಅಣ್ಣ ಕೊಕೆನ್‌, ಸ್ನೇಹಿತ ಸಬೀರ್‌ನನ್ನು ಗುಂಡಿನ ದಾಳಿ ನಡೆಸಿ ದೆಹಲಿ ಪೊಲೀಸರು ಸೆರೆ ಹಿಡಿದಿದ್ದರು. ಈ ವೇಳೆ ಮುನೀರ್‌ ತಪ್ಪಿಸಿಕೊಂಡರೆ, ಮಿಲನ್‌ನ ತಂದೆ ಹಮೀಮ್‌ ಸಿಕ್ಕಿಬಿದ್ದಿದ್ದ ಗ್ಯಾಂಗ್‌ನ ಇತರೆ ಸದಸ್ಯರ ಶೋಧ ಮುಂದುವರಿದಿತ್ತು.

ಬೆಂಗಳೂರು ಪೊಲೀಸರಿಗೆ ಡಿ.1ರಂದು ಕರೆ ಮಾಡಿದ್ದ ದೆಹಲಿ ಪೊಲೀಸರು, ಮುನೀರ್‌ ಹಾಗೂ ಮಿಲನ್‌ ಸದ್ಯದಲ್ಲೇ ಬೆಂಗಳೂರಿಗೆ ಬರುತ್ತಿರುವುದಾಗಿ ಮಾಹಿತಿ ಕೊಟ್ಟರು. ಈ ವಿಚಾರ ತಿಳಿದ ಕೂಡಲೇ ಕೆ.ಆರ್‌.ಪುರ ಠಾಣೆ ಪೊಲೀಸರು, ಡಕಾಯಿತರ ಬೆನ್ನಹತ್ತಿದ್ದರು. ಮೊಬೈಲ್‌ನ ಐಎಂಇಐ ಸಂಖ್ಯೆ ಪರಿಶೀಲಿಸಿದಾಗ ಅದೇ ಮೊಬೈಲ್‌ನಲ್ಲಿ 28 ಸಿಮ್‌ಗಳು ಬಳಕೆಯಾಗಿರುವುದು ತಿಳಿಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಹಲ್ಲೆಗೆ ಗುಂಡಿನ ಪಾಠ!

ಭಾನುವಾರ ರಾತ್ರಿಯೇ ನಗರಕ್ಕೆ ಬಂದು ಮುನೀರ್‌ ಹಾಗೂ ಮಿಲನ್‌, ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದರು. ಕೊನೆಗೆ ಮಂಗಳವಾರ ರಾತ್ರಿ ಅವರು, ಮೊಬೈಲ್‌ ಬಳಸಿ ಸಂಬಂಧಿಯೊಬ್ಬರಿಗೆ ಕರೆ ಮಾಡಿದ್ದರು. ಆ ಸಂಖ್ಯೆ ಜಾಡು ಹಿಡಿದು ಬೆನ್ನಹತ್ತಿದ್ದಾಗ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಇಮ್ಮಡಿಹಳ್ಳಿ ರಸ್ತೆಯಲ್ಲಿ ಅವರಿಬ್ಬರು ಕಣ್ಣಿಗೆ ಬಿದ್ದರು. ಕೂಡಲೇ ಅವರನ್ನು ಸುತ್ತುವರೆಯಲಾಯಿತು.

ಆಗ ನಮಗೆ ಚಾಕು ತೋರಿಸಿ ಬೆದರಿಸಲು ಶುರು ಮಾಡಿದರು. ಬಂಧಿಸಲು ಮುಂದಾದ ಕಾನ್‌ಸ್ಟೇಬಲ್‌ ಮಂಜುನಾಥ್‌ ಅವರ ತೋಳಿಗೆ ಮುನೀರ್‌ ಚುಚ್ಚುತ್ತಿದ್ದಂತೆಯೇ ಇನ್ಸ್‌ಪೆಕ್ಟರ್‌ ಜಯರಾಜ್‌ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಹೆದರಿ ಮಿಲನ್‌ ಓಡುತ್ತಿದ್ದ. ಅಷ್ಟರಲ್ಲಿ ಆತನನ್ನು ಹೆಡ್‌ ಕಾನ್‌ಸ್ಟೇಬಲ್‌ ಚಂದ್ರಪ್ಪ ಬೆನ್ನಹಟ್ಟಿಹೋಗಿ ಆತನ ಅಂಗಿಯ ಕೊರಳ ಪಟ್ಟಿಹಿಡಿದುಕೊಂಡರು. ಆಗ ಅವರ ಎಡಗಾಲಿನ ತೊಡೆಗೆ ಚುಚ್ಚಿ ಎದೆಗೂ ಇರಿಯಲು ಮುಂದಾದ. ಈ ಹಂತದಲ್ಲಿ ಪಿಎಸ್‌ಐ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲೂ ಕೃತ್ಯ

ಈ ಬಾಂಗ್ಲಾ ಗ್ಯಾಂಗ್‌ ನಗರದಲ್ಲೂ ಸಹ ಅಪರಾಧ ಕೃತ್ಯ ಎಸಗಿದ್ದ ಸಂಗತಿ ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 2017ರ ಏಪ್ರಿಲ್‌ 1 ರಂದು ನಗರಕ್ಕೆ ಬಂದಿದ್ದ ಮುನೀರ್‌ನ ಅಣ್ಣ ಕೊಕೆನ್‌ ನೇತೃತ್ವದ ತಂಡ, ಕೆ.ಆರ್‌.ಪುರದ ವೈಟ್‌ಸಿಟಿ ಲೇಔಟ್‌ನಲ್ಲಿ ಉದ್ಯಮಿಯೊಬ್ಬರನ್ನು ಅಡ್ಡಗಟ್ಟಿದರೋಡೆ ಮಾಡಿತ್ತು. ಕೃತ್ಯ ಎಸಗಿ ಅದೇ ಆರೋಪಿಗಳು ದೆಹಲಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.