ವಿರುಧ್‌ನಗರ್‌[ಡಿ.31]: ದಾನವಾಗಿ ಪಡೆದಿದ್ದ ರಕ್ತದಿಂದ ತಮಿಳುನಾಡಿನಲ್ಲಿ ಗರ್ಭಿಣಿಯೊಬ್ಬಳಿಗೆ ಎಚ್‌ಐವಿ ಸೋಂಕು ತಗುಲಿದ ಪ್ರಕರಣ, ಇದೀಗ ಒಂದು ಜೀವವನ್ನು ಬಲಿ ಪಡೆದಿದೆ. ಮಹಿಳೆಗೆ ಎಚ್‌ಐವಿ ಸೋಂಕು ತಗುಲಿದ ವಿಷಯ ತಿಳಿದು ಬೇಸರದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 19 ವರ್ಷದ ಯುವಕ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾನೆ.

ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರಿಗೆ ಇತ್ತೀಚೆಗೆ ವೈದ್ಯರು, ತೀವ್ರ ಅನೀಮಿಯಾದಿಂದ ಬಳಲುತ್ತಿರುವ ಕಾರಣ ರಕ್ತ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಖಾಸಗಿ ಆಸ್ಪತ್ರೆಯೊಂದರ ಬ್ಲಡ್‌ಬ್ಯಾಂಕ್‌ನಿಂದ ರಕ್ತಪಡೆದುಕೊಂಡಿದ್ದಳು.

ಈ ನಡುವೆ ವಿದೇಶಕ್ಕೆ ತೆರಳಲು ಕಡ್ಡಾಯ ರಕ್ತಪರೀಕ್ಷೆ ನಡೆಸಿದ ವೇಳೆ ವಿರುಧ್‌ನಗರ ಜಿಲ್ಲೆಯ ಯುವಕನಿಗೆ, ತಾನು ಎಚ್‌ಐವಿ ಸೋಂಕು ಪೀಡಿತ ಎಂಬುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ತಾನು ರಕ್ತದಾನ ಶಿಬಿರವೊಂದರಲ್ಲಿ ರಕ್ತದಾನ ಮಾಡಿದ್ದು ನೆನಪಾಗಿತ್ತು. ಹೀಗಾಗಿ ಆತ ಕೂಡಲೇ ರಕ್ತ ಸಂಗ್ರಹಿಸಿದ್ದ ಆಸ್ಪತ್ರೆಗೆ ತೆರಳಿ, ರಕ್ತ ಮರಳಿಸುವಂತೆ ಕೋರಿದ್ದ. ಈ ವೇಳೆ ಆತ ನೀಡಿದ್ದ ರಕ್ತವನ್ನು ಗರ್ಭಿಣಿಯೊಬ್ಬರಿಗೆ ನೀಡಿದ್ದಾಗಿ ಹೇಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬ್ಲಡ್‌ಬ್ಯಾಂಕ್‌ನ ಸಿಬ್ಬಂದಿ ಸೂಕ್ತ ಪರಿಶೀಲನೆ ನಡೆಸದೇ ರಕ್ತವನ್ನು ಹಸ್ತಾಂತರ ಮಾಡಿದ ಎಡವಟ್ಟಿನಿಂದಾಗಿ ಗರ್ಭಿಣಿ ಕೂಡಾ ತನ್ನಲದಲ್ಲದ ತಪ್ಪಿಗಾಗಿ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಳು. ಈ ವಿಷಯ ತಿಳಿದು, ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ.