ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸಾರ ಪ್ರಸಕ್ತ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 188 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು (ಜ.18): ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸಾರ ಪ್ರಸಕ್ತ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 188 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ರಾಜ್ಯದ ಬೆಂಗಳೂರು, ಮಂಗಳೂರು, ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಬಳ್ಳಾರಿ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 149 ಪುರುಷ, 8 ಮಹಿಳಾ ಹಾಗೂ ಇನ್ನುಳಿದ ವಯೋವೃದ್ಧ ಕೈದಿಗಳು ಸೇರಿದಂತೆ ಒಟ್ಟು 188 ಜನರನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಉಪಯೋಗಕ್ಕಾಗಿ ಔಷಧಿ ಕಿಟ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ 6.42 ಕೋಟಿ ರು. ಬಿಡುಗಡೆ ಮಾಡಿದೆ. ಪ್ರತಿ ಅಂಗನವಾಡಿಗೆ ಒಂದು ಸಾವಿರ ರು. ಹಾಗೂ ಬಾಲವಾಡಿಗೆ 500 ರು. ಮಿತಿಯಲ್ಲಿ ಕರ್ನಾಟಕ ಆ್ಯಂಟಿ ಬಯಾಟಿಕ್ ಆಂಡ್ ಫಾರ್ಮಸಿ ಲಿಮಿಟೆಡ್‌ನಿಂದ ಔಷಧಿ ಕಿಟ್ ಖರೀದಿಸಲಾಗುವುದು. ಆರು ತಿಂಗಳಿನಿಂದ 3 ವರ್ಷದ ಒಳಗಿನ 23.80 ಲಕ್ಷ ಮಕ್ಕಳು, 3ರಿಂದ 6 ವರ್ಷದೊಳಗಿನ 17.66 ಲಕ್ಷ ಮಕ್ಕಳು, 5.39 ಲಕ್ಷ ಗರ್ಭಿಣಿಯರು, 5.03 ಲಕ್ಷ ಬಾಣಂತಿಯರು, 4.09 ಲಕ್ಷ ಪ್ರಾಯಪೂರ್ವ ಬಾಣಂತಿಯರು ಹಾಗೂ 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 41.46 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.
ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಬನಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಡಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಹಾಗೂ ಯಾದಗಿರಿ ಜಿಲ್ಲೆಯ ಬಾಳಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ದ್ವಿತಿಯ ದರ್ಜೆ ಸಹಾಯಕ ಅಬ್ದುಲ್ ರವೂಫ್ ಅವರಿಗೆ ಶೇ.೫೦ರಷ್ಟು ನಿವೃತ್ತಿ ವೇತನ ಶಾಶ್ವತ ಕಡಿತಗೊಳಿಸಲು ಸಂಪುಟ ತೀರ್ಮಾನಿಸಿದೆ ಎಂದು ಜಯಚಂದ್ರ ತಿಳಿಸಿದರು.
![]()
