ಉತ್ತಮ ಸಾಧನೆ ತೋರದ 176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ನವದೆಹಲಿ (ಡಿ.20): ಉತ್ತಮ ಸಾಧನೆ ತೋರದ 176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಜು.01 2014 ರಿಂದ ಅ. 31 2017 ರವರೆಗೆ ಕೇಂದ್ರ ನಾಗರೀಕ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಎ ನ 53 ಅಧಿಕಾರಿಗಳು ಮತ್ತು ಗ್ರೂಪ್ ಬಿ 123 ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ಇಲಾಖೆ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ಅಖಿಲ ಭಾರತ ಸೇವಾ ನಿಯಮಗಳನ್ವಯ, ಸೇವೆಯ 15 ಹಾಗೂ 25 ವರ್ಷಗಳಲ್ಲಿ ಪ್ರತಿ ಅಧಿಕಾರಿಯ ಸಾಧನೆಗಳ ಪರಿಶೀಲನೆ ನಡೆಯುತ್ತದೆ. ಅಧಿಕಾರಿಯ ಸೇವಾ ದಾಖಲೆ, ವಾರ್ಷಿಕ ಗೌಪ್ಯ ವರದಿ (ಏಸಿಆರ್) ಹಾಗೂ ಹಿರಿಯ ಅಧಿಕಾರಿಗಳು ನಡೆಸುವ ಪರಿಶೀಲನಾ ವರದಿಗಳನ್ನಾಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಇಂತಹ ಅಪರೂಪದ ಕ್ರಮವನ್ನು ಸುಮಾರು 10 ವರ್ಷಗಳ ಹಿಂದೆ ಕೈಗೊಳ್ಳಲಾಗಿತ್ತು. ಇದು ದಂಡನೆಯಾಗಿರದೇ, ಕೇವಲ ಸಮರ್ಥವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗುವ ಕ್ರಮವಾಗಿದೆ. ಕಡ್ಡಾಯ ನಿವೃತ್ತಿಗೊಳಲ್ಪಟ್ಟ ಅಧಿಕಾರಿಗೆ, ನಿವೃತ್ತಿಯೋತ್ತರ ಸವಲತ್ತುಗಳು ಯಥಾರೀತಿ ಸಿಗುವುದು.
