ಬೆಂಗಳೂರು (ಮೇ. 21):  ಬಿಬಿಎಂಪಿ ಸಗಾಯಪುರ ಹಾಗೂ ಕಾವೇರಿಪುರ ವಾರ್ಡ್‌ಗಳಿಗೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾವೇರಿಪುರ ವಾರ್ಡ್‌ನ ಸದಸ್ಯರಾಗಿದ್ದ ಉಪಮೇಯರ್‌ ರಮಿಳಾ ಉಮಾಶಂಕರ್‌ ಹಾಗೂ ಸಗಾಯಿಪುರ ವಾರ್ಡ್‌ನ ಸದಸ್ಯರಾಗಿದ್ದ ಏಳುಮಲೈ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮೇ 29ರಂದು ಉಪ ಚುನಾವಣೆ ನಡೆಯುತ್ತಿದೆ. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.

ಕಾವೇರಿಪುರ ವಾರ್ಡ್‌ಗೆ ಸಂಬಂಧ ಪಟ್ಟಂತೆ ಸೋಮವಾರ ಯಾವುದೇ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದಿಲ್ಲ. ಅಂತಿಮವಾಗಿ ಬಿಜೆಪಿ, ಜೆಡಿಎಸ್‌ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ.

ಸಗಾಯಿಪುರ ವಾರ್ಡ್‌ಗೆ ಎಸ್‌ಟಿಪಿಐನಿಂದ ಇಬ್ಬರು ಅಭ್ಯರ್ಥಿ ಸೇರಿದಂತೆ ಒಟ್ಟು 14 ಮಂದಿ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಎಸ್‌ಟಿಪಿಐ ಪಕ್ಷದ ಒಬ್ಬರು ನಾಮಪತ್ರ ವಾಪಾಸ್‌ ಪಡೆದಿದ್ದು, ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಲಾ ಒಂದೊಂದು ವಾರ್ಡ್‌ನಲ್ಲಿ ಸ್ಪರ್ಧಿಸಿವೆ. ಆದರೆ, ಎರಡೂ ಕಡೆಗಳಲ್ಲಿ ಈ ಪಕ್ಷಗಳಿಗೆ ಬಂಡಾಯದ ಭೀತಿ ಎದುರಾಗಿದೆ. ಸಗಾಯಿಪುರದಲ್ಲಿ ಏಳುಮಲೈ ಕುಟುಂಬದಲ್ಲೇ ಅಪಸ್ವರ ಕೇಳಿಬಂದಿದೆ. ಇನ್ನು ಜೆಡಿಎಸ್‌ನಿಂದ ಟಿಕೆಟ್‌ ಬಯಸಿದ್ದ ಮಾರಿಮುತ್ತು ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.

ಇದೇ ಪರಿಸ್ಥಿತಿ ಕಾವೇರಿಪುರ ವಾರ್ಡ್‌ನಲ್ಲೂ ಇದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಎನ್‌.ಸುಶೀಲಾ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ಗೆ ರಮಿಳಾ ಉಮಾಶಂಕರ್‌ ಅವರ ಕುಟುಂಬದವರು ಇಲ್ಲವೆ ಸಂಬಂಧಿಗಳಿಗೆ ಟಿಕೆಟ್‌ ಕೊಡಿಸಬೇಕು ಎಂದು ಉಮಾಶಂಕರ್‌ ಪ್ರಯತ್ನಿಸಿದ್ದರು.

ಇದಕ್ಕೆ ಜೆಡಿಎಸ್‌ ಒಪ್ಪಲಿಲ್ಲ. ಇದರಿಂದ ಉಮಾಶಂಕರ್‌ ಅಸಮಾಧಾನಗೊಂಡಿದ್ದಾರೆ. ಎರಡೂ ಕಡೆಗಳಲ್ಲಿ ಆಯಾ ಪಕ್ಷಗಳಲ್ಲೇ ಅಸಮಾಧಾನವಿರುವುದರಿಂದ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಗಾಯಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೇಯೆರೀಮ್‌, ಕಾವೇರಿ ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಲ್ಲವಿ ಕಣದಲ್ಲಿದ್ದಾರೆ.