ಬೆಂಗಳೂರು (ಸೆ. 02):  ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣ ಪ್ರಕರಣಗಳಲ್ಲಿ ನಿರ್ವಾಹಕರಿಗೆ ವಿಧಿಸುವ ದಂಡಕ್ಕೆ ಯಾವುದೇ ಮಿತಿಯಿಲ್ಲದೇ ಇರುವುದು ನಿರ್ವಾಹಕರ ಶೋಷಣೆಗೆ ಕಾರಣವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.

ಪ್ರಯಾಣಿಕರು ಟಿಕೆಟ್‌ ಪಡೆಯದೇ ಮಾರ್ಗ ಮಧ್ಯೆ ತನಿಖಾಧಿಕಾರಿಗಳಿಗೆ ಸಿಕ್ಕಿ ಬಿದ್ದರೆ ಗರಿಷ್ಠ 500 ರು. ವರೆಗೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ 5ರು. ಟಿಕೆಟ್‌ ಪಡೆಯದೇ ಸಿಕ್ಕಿ ಬಿದ್ದರೆ ಟಿಕೆಟ್‌ ಮೊತ್ತದ ಹತ್ತು ಪಟ್ಟು ಅಂದರೆ 50ರು. ದಂಡ ವಸೂಲಿ ಮಾಡಲಾಗುತ್ತದೆ.

ದೂರದೂರದ ಪ್ರಯಾಣದ ವೇಳೆ ಗರಿಷ್ಠ 500 ರು. ವರೆಗೂ ದಂಡ ವಿಧಿಸಲಾಗುತ್ತದೆ. ಆದರೆ, ಟಿಕೆಟ್‌ ನೀಡದೆ ಸಿಕ್ಕಿ ಬೀಳುವ ನಿರ್ವಾಹಕನಿಗೆ ಇಂತಿಷ್ಟೇ ದಂಡ ವಿಧಿಸಬೇಕೆಂಬ ನಿಯಮವಿಲ್ಲ. ಹಾಗಾಗಿ ಶಿಸ್ತುಪಾಲನಾ ಅಧಿಕಾರಿಗಳಾಗಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ವಿವೇಚಾನಾಧಿಕಾರ ಬಳಸಿ ನಿರ್ವಾಹಕರಿಗೆ ದಂಡ ವಿಧಿಸುತ್ತಿದ್ದಾರೆ.

ಪ್ರಯಾಣಿಕನಿಗೆ ಟಿಕೆಟ್‌ ನೀಡದೆ ಸಂಸ್ಥೆಯ ಆದಾಯ ನಷ್ಟಮಾಡಿದ ಆರೋಪದಡಿ 5 ಸಾವಿರ ರು.ನಿಂದ 15 ಸಾವಿರ ರು. ವರೆಗೂ ದುಬಾರಿ ದಂಡ ವಿಧಿಸುತ್ತಾರೆ. ಕೆಲ ಪ್ರಕರಣಗಳಲ್ಲಿ ನಿರ್ವಾಹಕರನ್ನು ಸೇವೆಯಿಂದ ಅಮಾನತು ಅಥವಾ ಸೇವೆಯಿಂದ ವಜಾಗೊಳಿಸುವ ಅವಕಾಶವೂ ಇದೆ.

ಪ್ರಯಾಣಿಕರಿಗೆ ಗರಿಷ್ಠ ದಂಡ ಮೊತ್ತ ನಿಗದಿಗೊಳಿಸಿ, ತಪ್ಪಿತಸ್ಥ ನಿರ್ವಾಹಕನಿಗೆ ಯಾವುದೇ ಗರಿಷ್ಠ ದಂಡ ನಿಗದಿ ಮಾಡದಿರುವುದು ಶೋಷಣೆಗೆ ಕಾರಣವಾಗಿದೆ. ಇದರಿಂದ ಪ್ರತಿ ವರ್ಷ ಪ್ರಯಾಣಿಕರಿಂದ ವಸೂಲಿ ಮಾಡುವ ದಂಡದ ಮೊತ್ತಕ್ಕಿಂತ ನಿರ್ವಾಹಕರಿಂದ ವಸೂಲಿ ಮಾಡುವ ದಂಡದ ಮೊತ್ತವೇ ಹೆಚ್ಚಿರುತ್ತದೆ ಎಂದು ಕೆಎಸ್‌ಆರ್‌ಟಿಸಿಯ ನಿರ್ವಾಹಕರೊಬ್ಬರು ಅಳಲು ತೋಡಿಕೊಂಡರು.

ಗರಿಷ್ಠ ದಂಡ ನಿಗದಿಯಾಗಬೇಕು:

ಟಿಕೆಟ್‌ ರಹಿತ ಪ್ರಯಾಣ ಪ್ರಕರಣಗಳಲ್ಲಿ ಯಾವಾಗಲೂ ನಿರ್ವಾಹಕರೇ ತಪ್ಪು ಮಾಡುವುದಿಲ್ಲ. ಎಷ್ಟೋ ಬಾರಿ ಪ್ರಯಾಣಿಕರು ನಿರ್ವಾಹಕರ ಕಣ್ಣು ತಪ್ಪಿಸಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಾರೆ. ಇಂತಹ ಪ್ರಕರಣಗಳಲ್ಲೂ ನಿರ್ವಾಹಕರನ್ನೇ ಹೊಣೆಗಾರರನ್ನಾಗಿಸಿ ದಂಡ, ಅಮಾನತು ಶಿಕ್ಷೆಗೆ ವಿಧಿಸುವುದು ಎಷ್ಟುಸರಿ? ಮೇಲಾಧಿಕಾರಿಗಳು ವಿವೇಚನಾಧಿಕಾರ ಬಳಸಿ ಮನಸೋ ಇಚ್ಛೆ ದುಬಾರಿ ದಂಡ ವಿಧಿಸುವುದರಿಂದ ತಿಂಗಳ ವೇತನ ಈ ದಂಡಕ್ಕೆ ಹೋಗುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಗರಿಷ್ಠ ದಂಡದ ಮೊತ್ತ ನಿಗದಿಪಡಿಸಿರುವ ಹಾಗೆ ನಿರ್ವಾಹಕರಿಗೂ ಗರಿಷ್ಠ ದಂಡದ ಮೊತ್ತ ನಿಗದಿಗೊಳಿಸಬೇಕು ಎಂದು ಎಂದು ಸಾರಿಗೆ ನೌಕರರ ಮುಖಂಡ ಯೋಗೇಶ್‌ ಗೌಡ ಒತ್ತಾಯಿಸುತ್ತಾರೆ.

ವರ್ಷ ಪ್ರಯಾಣಿಕರಿಂದ ದಂಡ(ಲಕ್ಷ ರು.) ನಿರ್ವಾಹಕರಿಂದ ದಂಡ(ಕೋಟಿ ರು.)

2015-16 59.14 7.06

2016-17 59.77 6.56

2017-18 66.03 6.37

2018-19 65.08 6.61

ಒಟ್ಟು 2.50 ಕೋಟಿ ರು. 26.06