ಬೆಂಗಳೂರು :  ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಎಂದೇ ಗುರುತಿಸಲ್ಪಡುವ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ ಕೊರಳಿಗೆ ಬೇನಾಮಿ ಆಸ್ತಿ ಉರುಳು ಸಿಲುಕುವ ಸಾಧ್ಯತೆ ಹೆಚ್ಚಾಗಿದ್ದು, ಕೋಟ್ಯಂತರ ರು. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ದೃಢಪಟ್ಟಿದೆ.

ಸಚಿವ ಶಿವಕುಮಾರ್‌ಗೆ ಸೇರಿದ ಬೇನಾಮಿ ಆಸ್ತಿಯ ಕುರಿತು ದೆಹಲಿಯಲ್ಲಿನ ಬೇನಾಮಿ ನ್ಯಾಯಾಧಿಕರಣಕ್ಕೆ ಶೀಘ್ರದಲ್ಲಿಯೇ ವರದಿ ಸಲ್ಲಿಕೆ ಮಾಡಲು ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ. ವರದಿ ಸಲ್ಲಿಕೆಯಾದ ಬಳಿಕ ಶಿವಕುಮಾರ್‌ ಅವರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

2017ರ ಆಗಸ್ಟ್‌ ತಿಂಗಳಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್‌ ಅವರ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರು.ನಷ್ಟುಅಘೋಷಿತ ಆದಾಯ ಪತ್ತೆಯಾಗಿತ್ತು. ಇದರ ಮಾಹಿತಿಯ ಜಾಡು ಹಿಡಿದು ತನಿಖೆ ಕೈಗೊಂಡ ಅಧಿಕಾರಿಗಳಿಗೆ ಬೇನಾಮಿ ಆಸ್ತಿ ಮಾಡಿರುವುದು ಗೊತ್ತಾಗಿದೆ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿದಾಗ ಹಲವು ಮಂದಿಯ ಹೆಸರಲ್ಲಿ ಆಸ್ತಿ ಮಾಡಿರುವುದು ಗೊತ್ತಾಗಿದೆ. ಸುಮಾರು 120 ಕೋಟಿ ರು.ಗಿಂತ ಹೆಚ್ಚು ಬೇನಾಮಿ ಆಸ್ತಿ ಹೊಂದಿರುವುದು ಗೊತ್ತಾಗಿದೆ. ಪ್ರಕರಣದ ತನಿಖೆಯು ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಅಂತಿಮ ವರದಿಯನ್ನು ದೆಹಲಿಯಲ್ಲಿನ ಬೇನಾಮಿ ನ್ಯಾಯಾಧಿಕರಣಕ್ಕೆ ಸಲ್ಲಿಕೆ ಮಾಡಲಾಗುವುದು. ಬಳಿಕ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ಹೇಳಿವೆ.

ಬೇನಾಮಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪ್ರತಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಅಗತ್ಯ ಬಿದ್ದವರನ್ನು ವಿಚಾರಣೆ ಕರೆದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಶಿವಕುಮಾರ್‌ ತಾಯಿ ಹೆಸರಿನಲ್ಲೂ ಅಕ್ರಮ ಸಂಪಾದನೆ ಮಾಡಿರುವ ಬಗ್ಗೆ ಸುಳಿವು ಲಭ್ಯ ಇದ್ದು, ಖಚಿತ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು. ಕಳೆದ ವಾರವಷ್ಟೇ ಐಟಿ ಅಧಿಕಾರಿಗಳು ಶಿವಕುಮಾರ್‌ ತಾಯಿ ಅವರನ್ನು ಕರೆದು ವಿಚಾರಣೆ ನಡೆಸಿ ಈ ನಿಟ್ಟಿನಲ್ಲಿ ಹಲವು ಮಾಹಿತಿಗಳನ್ನು ಕ್ರೋಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಜಾರಿ ನಿರ್ದೇಶನಾಲಯವು ಸಹ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಮುಗಿಸುವ ಸಾಧ್ಯತೆ ಇದೆ. ಎಲ್ಲ ಅಂಶಗಳನ್ನು ಒಗ್ಗೂಡಿಸಿ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.