ಬೆಂಗಳೂರು [ಜು.12]:  ಅತೃಪ್ತ ಶಾಸಕರಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಸುಪ್ರೀಂಕೋರ್ಟ್‌ ಆದೇಶ ಹಾಗೂ ವಿಧಾನಸೌಧ ಆವರಣದಲ್ಲೇ ರಾಜೀನಾಮೆ ನೀಡಿದ ಶಾಸಕರ ಮೇಲೆ ಗಲಾಟೆ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರಿಂದ ರಾಜ್ಯದ ಶಕ್ತಿ ಕೇಂದ್ರದಲ್ಲಿ ಗುರುವಾರ ಅಕ್ಷರಶಃ ‘ಖಾಕಿ ಭದ್ರತಾ ಕೋಟೆ’ ನಿರ್ಮಾಣವಾಗಿತ್ತು.

ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಮುಂಬೈನಲ್ಲಿದ್ದ ಅತೃಪ್ತ ಶಾಸಕರು, ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಮುಂದೆ ಮತ್ತೆ ಹಾಜರಾಗಿ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ ಪೊಲೀಸರು, ವಿಧಾನಸೌಧ ಮತ್ತು 11 ಅತೃಪ್ತ ಶಾಸಕರ ಪ್ರಯಾಣ ಹಾದಿಯಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದರು.

ನಾಲ್ವರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 14 ಡಿಸಿಪಿ, 30 ಎಸಿಪಿಗಳು ಹಾಗೂ 100 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು 1 ಸಾವಿರಕ್ಕೂ ಅಧಿಕ ಪೊಲೀಸರು ಬಂದೋಬಸ್‌್ತಗೆ ನಿಯುಕ್ತಿಗೊಂಡಿದ್ದರು. ಹಾಗೆಯೇ ರಾಜ್ಯ ಸಶಸ್ತ್ರ ಮೀಸಲು ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಸಹ ಬಳಕೆ ಮಾಡಿಕೊಳ್ಳಲಾಗಿತ್ತು.

ವಿಧಾನಸೌಧ ಆವರಣದಲ್ಲಿ ಹೆಜ್ಜೆ ಹೆಜ್ಜೆಗೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುರುತಿನ ಪತ್ರ ಇಲ್ಲದೆ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಹೊರತಾಗಿ ಸಾರ್ವಜನಿಕರಿಗೆ ಶಕ್ತಿ ಕೇಂದ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬಂದೋಸ್‌್ತ ಉಸ್ತುವಾರಿಯನ್ನು ಖುದ್ದು ಆಯುಕ್ತ ಅಲೋಕ್‌ ಕುಮಾರ್‌ ನಿರ್ವಹಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಹಾಗೂ ಆಂತರಿಕ ಭದ್ರತಾ ವಿಭಾಗದ ಎ.ಎಂ.ಪ್ರಸಾದ್‌ ಅವರು ಸಹ ಮಧ್ಯಾಹ್ನ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ ಬಳಿಕ ವಿಧಾನಸೌಧದ ಆವರಣದಲ್ಲೇ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಮೇಲೆ ಕಾಂಗ್ರೆಸ್‌ ಪಕ್ಷದ ಮುಖಂಡರು ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಸಹ ಸ್ಪೀಕರ್‌ ಭೇಟಿಗೆ ಬರುವ ಶಾಸಕರಿಗೆ ರಕ್ಷಣಾ ಒದಗಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿತ್ತು. ಇತ್ತ ಮುಂಬೈನಲ್ಲಿದ್ದ ಶಾಸಕರು ಕೂಡಾ ರಕ್ಷಣೆ ಕೋರಿ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.

ಪ್ರತಿ ಪ್ರವೇಶ ದ್ವಾರಕ್ಕೂ ಡಿಸಿಪಿಗಳ ನಿಗಾ

ವಿಧಾನಸೌಧ ಆವರಣದಲ್ಲಿ ಗಲಾಟೆ ಬಳಿಕ ಎಚ್ಚೆತ್ತ ಆಯುಕ್ತರು, ನಾಲ್ವರು ಹೆಚ್ಚುವರಿ ಆಯುಕ್ತರು ಹಾಗೂ 14 ಮಂದಿ ಡಿಸಿಪಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಒಬ್ಬೊಬ್ಬರಿಗೂ ಪ್ರತ್ಯೇಕ ಹೊಣೆಗಾರಿಕೆ ನೀಡಿದರು. ಒಂದಿನಿತೂ ಸಹ ಶಾಕಸಕರಿಗೆ ತೊಂದರೆ ಉಂಟಾಗದಂತೆ ಜಾಗರೂಕತೆಯನ್ನು ಪೊಲೀಸರು ವಹಿಸಿದ್ದರು.

ವಿಧಾನಸೌಧದ ಪ್ರತಿ ಪ್ರವೇಶ ದ್ವಾರಕ್ಕೆ ಓರ್ವ ಡಿಸಿಪಿ ನೇತೃತ್ವದಲ್ಲಿ ಕಣ್ಗಾವಲು ಹಾಕಲಾಗಿತ್ತು. ಅದೇ ರೀತಿ ಇಬ್ಬರು ಜಂಟಿ ಆಯುಕ್ತರು, ಸ್ಪೀಕರ್‌ ಕಚೇರಿ ಮುಂದಿನ ಭದ್ರತೆಯಲ್ಲಿದ್ದರೆ, . ಬುಧವಾರ ರಾತ್ರಿ ನಗರಕ್ಕೆ ಮರಳಿದ್ದ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರಿಗೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಸಾರಥ್ಯದಲ್ಲಿ ರಕ್ಷಣೆ ನೀಡಲಾಗಿತ್ತು. ಹಾಗೆಯೇ ಸಂಜೆ ಮುಂಬೈನಿಂದ ಆಗಮಿಸಿದ ಅತೃಪ್ತ ಶಾಸಕರನ್ನು ವಿಧಾನಸೌಧಕ್ಕೆ ಕರೆತಂದು ಮತ್ತೆ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತಲುಪಿಸುವ ಹೊಣೆಗಾರಿಕೆ ವೈಟ್‌ಫೀಲ್ಡ್‌ ಡಿಸಿಪಿ ಎಂ.ಎನ್‌.ಅನುಚೇತ್‌ ಅವರ ಹೆಗಲಿಗೆ ಬಿದ್ದಿತ್ತು. ಅಲ್ಲದೆ, ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಶಾಸಕರು ಪ್ರಯಾಣಿಸದ ಮಾರ್ಗದಲ್ಲೂ ಸಹ ಖಾಕಿ ಪಹರೆ ಇತ್ತು. ಹೀಗೆ ಬೆಳಗ್ಗೆಯಿಂದ ಸಂಜೆ ವರೆಗೆ ಶಾಸಕರ ಕಾವಲು ಕಾದ ಪೊಲೀಸರು, ಕೊನೆಗೆ ರಾಜೀನಾಮೆ ಪರ್ವಕ್ಕೆ ಶಾಂತಿಯುತ ತೆರೆ ಎಳೆದು ನಿಟ್ಟುಸಿರು ಬಿಟ್ಟರು.