Asianet Suvarna News Asianet Suvarna News

100 ವರ್ಷದಿಂದ ದಿವಾನ್ ಕುಟುಂಬದಿಂದ ಕಾವೇರಿ ವಾದ

ವಕೀಲಿಕೆಯಲ್ಲಿ ಹೆಸರು ಮಾಡಿರುವ ದಿವಾನ್ ಕುಟುಂಬ ಕಾವೇರಿ ಪ್ರಕರಣದಲ್ಲಿ ಒಂದು ಶತಮಾನದಿಂದಲೂ ಭಾಗಿಯಾಗಿದೆಯಂತೆ.

100 Years For Cauvery Water Dispute

ಪ್ರಶಾಂತ್ ನಾತು

ನವದೆಹಲಿ : ವಕೀಲಿಕೆಯಲ್ಲಿ ಹೆಸರು ಮಾಡಿರುವ ದಿವಾನ್ ಕುಟುಂಬ ಕಾವೇರಿ ಪ್ರಕರಣದಲ್ಲಿ ಒಂದು ಶತಮಾನದಿಂದಲೂ ಭಾಗಿಯಾಗಿದೆಯಂತೆ. ಈಗ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡಿನ ಅಂತರ್ಜಲದ ಬಗ್ಗೆ ವಾದ ಮಾಡಿದ ಶ್ಯಾಮ್ ದಿವಾನ್ ಕರ್ನಾಟಕದ ಪರವಾಗಿವಾದ ಮಾಡಿದ ನಾಲ್ಕನೇ ವಕೀಲ. ಇವರ ತಂದೆ ಅನಿಲ್ ದಿವಾನ್ ಬಹುತೇಕ ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಪ್ರಕರಣಗಳಲ್ಲಿ ಕಳೆದ ಮೂರು ದಶಕದಿಂದಲೂ ಫಾಲಿ ನಾರಿಮನ್ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟವರು. ಅನಿಲ್ ದಿವಾನ್ ಅವರ ತಾಯಿಯ ತಂದೆ ಅಂದರೆ ಅಜ್ಜ ಸರ್ ಚಿಮನ್‌ಲಾಲ್ ಸೆಟಲ್ವಾಡ್ 1924ರ ಮೈಸೂರು ಮತ್ತು ಮದ್ರಾಸ್ ನಡುವಿನ ಕಾವೇರಿ ಒಪ್ಪಂದದ ಸಮಯದಲ್ಲಿ ಕರ್ನಾಟಕದ ವಕೀಲರಾಗಿದ್ದರಂತೆ.

ಆಗ ಮೈಸೂರು ಮಹಾರಾಜರು ಚಿಮನ್‌ಲಾಲ್ ಸೆಟಲ್ವಾಡ್ ಅವರನ್ನು ಮುಂಬೈ ನಿಂದ ವಿಶೇಷ ರೈಲಿನಲ್ಲಿ ಕರೆಸಿಕೊಳ್ಳುತ್ತಿದ್ದರಂತೆ. 1990ರಲ್ಲಿ ಕಾವೇರಿ ಟ್ರಿಬ್ಯೂನಲ್‌ನಲ್ಲಿ ವಾದ ಮಂಡನೆ ಆರಂಭವಾದಾಗ ಫಾಲಿ ನಾರಿಮನ್‌ರಿಗೆ 1924 ರ ಒಪ್ಪಂದದ ಬಗ್ಗೆ ಯಾವುದೇ ಟಿಪ್ಪಣಿ ಸಿಕ್ಕಿರಲಿಲ್ಲ. ಆದರೆ ಅನಿಲ್ ದಿವಾನ್ ತನ್ನ ಅಜ್ಜನ ಡೈರಿಯಿಂದ 1924ರ ಕಾವೇರಿ ಒಪ್ಪಂದದ ಬಗ್ಗೆ ಬರೆದಿದ್ದ ಟಿಪ್ಪಣಿ ತಂದುಕೊಟ್ಟಿದ್ದರಂತೆ.

ನಿರ್ವಹಣಾ ಮಂಡಳಿ ಎಂಬ ಗುಮ್ಮ

ಕರ್ನಾಟಕದ ವಕೀಲರಿಂದ ಹಿಡಿದು ರಾಜಕಾರಣಿಗಳು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಖಾಸಗಿಯಾಗಿ ಮಾತನಾಡುವಾಗ,‘ಅಯ್ಯೋ ನೀರು ಹಂಚಿಕೆ ಆದ ಮೇಲೆ ನಿರ್ವಹಣಾ ಮಂಡಳಿ ಬರಲೇಬೇಕು, ಅದು ಅನಿವಾರ್ಯ’ ಎಂದೆಲ್ಲಾ ಮಾತನಾಡುತ್ತಾರೆ. ಆದರೆ ಬೆಂಗಳೂರಿಗೆ ಕಾಲಿಟ್ಟ ತಕ್ಷಣ ವರಸೆ ಬದಲಿಸುತ್ತಾರೆ. ನಿರ್ವಹಣಾ ಮಂಡಳಿ ಏನೇ ಮಾಡಿದರೂ ಬರೋದೇ, ನೀವು ಬರೆಯಿರಿ ಎಂದು ಮಾಧ್ಯಮಗಳಿಗೆ ಹೇಳುವ ರಾಜ್ಯದ ಪರ ವಕೀಲರು, ಹಾಗಾದರೆ ನೀವು ಆನ್ ರೆಕಾರ್ಡ್ ಹೇಳಿ ಎಂದರೆ ತಯಾರಾಗುವುದಿಲ್ಲ. ಒಟ್ಟಾರೆ ಅರ್ಥ ನಿರ್ವಹಣಾ ಮಂಡಳಿ ಎಂದರೆ ಒಂದು ಗುಮ್ಮ ಎಂಬ ಅಭಿಪ್ರಾಯ ಮಾತ್ರ ತಯಾರಾಗಿದೆ.

Follow Us:
Download App:
  • android
  • ios