‘ಮಿಷನ್ ಶಕ್ತಿ’ಗಾಗಿ ಕೆಲಸ ಶುರುವಾಗಿದ್ದು ಕಳೆದ 6 ತಿಂಗಳಿಂದ
‘ಮಿಷನ್ ಶಕ್ತಿ’ಯನ್ನು ಕಾರ್ಯರೂಪಕ್ಕೆ ತರಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ 100 ಮಂದಿ ವಿಜ್ಞಾನಿಗಳ ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿತ್ತು ಎಂಬ ಕುತೂಹಲಕಾರಿ ಸಂಗತಿ ಬಹಿರಂಗಗೊಂಡಿದೆ.
ನವದೆಹಲಿ: ಉಪಗ್ರಹ ಛೇದಕ ಕ್ಷಿಪಣಿ ಅಭಿವೃದ್ಧಿ ಯೋಜನೆ ‘ಮಿಷನ್ ಶಕಿ’ಯನ್ನು ಕಾರ್ಯರೂಪಕ್ಕೆ ತರಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ 100 ಮಂದಿ ವಿಜ್ಞಾನಿಗಳ ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿತ್ತು ಎಂಬ ಕುತೂಹಲಕಾರಿ ಸಂಗತಿ ಬಹಿರಂಗಗೊಂಡಿದೆ.
ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಡಿಆರ್‌ಡಿಒ ಮುಖ್ಯಸ್ಥ ಜಿ. ಸತೀಶ್ ರೆಡ್ಡಿ, ಉಪಗ್ರಹ ಛೇದಕ ಎ- ಸ್ಯಾಟ್ ಕ್ಷಿಪಣಿ ಅಭಿವೃದ್ಧಿಗೆ ಮೊದಲೇ ಯೋಜನೆಗಳು ಸಿದ್ಧವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿದ್ದು ಆರು ತಿಂಗಳ ಹಿಂದೆ. ಕ್ಷಿಪಣಿ ಪ್ರಯೋಗಕ್ಕೆ ದಿನಾಂಕವೂ ನಿಗದಿಯಾಗಿದ್ದರಿಂದ 100 ವಿಜ್ಞಾನಿಗಳ ತಂಡ ದಿನದ 24 ಗಂಟೆಯೂ ಅವಿರತವಾಗಿ ಕಾರ್ಯನಿರ್ವಹಿಸುವ ಮೂಲಕ ಗುರಿಯನ್ನು ಸಾಧಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ನಾವು ರಾಜತಾಂತ್ರಿಕ ವಿಷಯಗಳ ಬಗ್ಗೆ ವರದಿಯನ್ನು ನೀಡಿದ್ದೆವು. ಅವರು ಪ್ರಧಾನಿಯ ಸಮ್ಮತಿ ಪಡೆದು ನಿಗದಿತ ದಿನಾಂಕದಂದು ಕ್ಷಿಪಣಿ ಪರೀಕ್ಷೆಗೆ ಹಸಿರು ನಿಶಾನೆ ತೋರಿದರು ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಇದೇ ವೇಳೆ ಎ- ಸ್ಯಾಟ್ ದಾಳಿಗೆ ಪೃಥ್ವಿ ಕ್ಷಿಪಣಿ ಬಳಸಿಲ್ಲ. ಉಪಗ್ರಹ ಛೇದಕ ಅಸ್ತ್ರವಾಗಿ ಈ ಕ್ಷಿಪಣಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಅಂತರಿಕ್ಷ ಕೆಳ ಭೂಕಕ್ಷೆಯಲ್ಲಿರುವ ಯಾವುದೆ ವಸ್ತುವನ್ನು ನಾಶಪಡಿಸಬಲ್ಲ ಸಾಮರ್ಥ್ಯವನ್ನು ಎ-ಸ್ಯಾಟ್ ಹೊಂದಿದೆ. ಇದು 1000 ಕಿ.ಮಿ.ಗಿಂತಲೂ ಹೆಚ್ಚಿನ ದೂರದ ವ್ಯಾಪ್ತಿಯನ್ನು ಹೊಂದಿದೆ ಎಂದು ರೆಡ್ಡಿ ಹೇಳಿದ್ದಾರೆ.
ಕ್ಷಿಪಣಿ ಪ್ರಯೋಗದ ರಹಸ್ಯ 5-6 ಮಂದಿಗಷ್ಟೇ ಗೊತ್ತಿತ್ತು
ಭಾರತ ಉಪಗ್ರ ಛೇದಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸುವ ವರೆಗೂ ಈ ಯೋಜನೆಯ ಬಗ್ಗೆ ಅತ್ಯಂತ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತು. ಕೇವಲ 5ರಿಂದ 6 ಮಂದಿಯನ್ನು ಹೊರತುಪಡಿಸಿ ಉಳಿದ ಯಾರಿಗೂ ಕ್ಷಿಪಣಿ ಪ್ರಯೋಗದ ಬಗ್ಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ!
ಎ- ಸ್ಯಾಟ್ ಕ್ಷಿಪಣಿ ಪ್ರಯೋಗದ ಬಳಿಕ ಮಾಧ್ಯಮವೊಂದರ ಜೊತೆ ಮಾಹಿತಿ ಹಂಚಿಕೊಂಡಿರುವ ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ, ಮಿಷನ್ ಶಕ್ತಿ- ಉಪಗ್ರಹ ಛೇದಕ ಕ್ಷಿಪಣಿಯ ವ್ಯಾಪ್ತಿ ಮತ್ತು ಉದ್ದೇಶದ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡು ಬರಲಾಗಿತ್ತು. ಬುಧವಾರ ಕ್ಷಿಪಣಿ ಪರೀಕ್ಷೆ ನಡೆಯುವ ಬಗ್ಗೆ ಮಂಗಳವಾರ ಸಂಜೆಯವರೆಗೂ ಪ್ರಧಾನಿ ಸೇರಿ 5ರಿಂದ 6 ಮಂದಿಯನ್ನು ಹೊರತುಪಡಿಸಿ ಉಳಿದ ಯಾರಿಗೂ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
1998ರಲ್ಲಿ ಭಾರತ ಫೋಖರನ್ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸಂದರ್ಭದಲ್ಲೂ ಇದೇ ರೀತಿಯ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತು. ಫೋಖರನ್ ಅಣು ಪರೀಕ್ಷೆ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ನಾಂದಿ ಹಾಡಿತ್ತು. ಇದರ ಫಲವಾಗಿ ಭಾರತ ಬಾಹ್ಯಾಕಾಶದಲ್ಲಿ ಸೂಪರ್ ಪವರ್ ಎನಿಸಿಕೊಂಡಿದೆ.