Asianet Suvarna News Asianet Suvarna News

ಹಿಂದಿ ಹೇರಿಕೆ; ಭಾಷಾನೀತಿ ಬಗ್ಗೆ 10 ವಾಸ್ತವಗಳು!

ದೇಶದೆಲ್ಲೆಡೆ ಹಿಂದಿ ಹರಡಲು ಶ್ರಮಿಸಿದ ಕೇಂದ್ರ ಸರ್ಕಾರಿ ನೌಕರರಿಗೆ ತೆರಿಗೆದಾರರ ಹಣದಲ್ಲಿ ಪ್ರತಿ ವರ್ಷ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡಲಾಗುತ್ತದೆ. ಹಲವು ಭಾಷೆಗಳ ನಾಡಿನಲ್ಲಿ ಪ್ರಭುತ್ವವು ಕೇವಲ ಒಂದು ಭಾಷೆಯ ಬೆನ್ನಿಗೆ ನಿಂತು, ಇನ್ನುಳಿದ ಭಾಷೆಗಳನ್ನು ಕಡೆಗಣಿಸುವ ಇಂತಹ ಆಚರಣೆ ಭಾಷಾವಾರು ಪ್ರಾಂತ್ಯಗಳ ಒಕ್ಕೂಟಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಪೂರಕವಾದ ವ್ಯವಸ್ಥೆಯಲ್ಲ. ಹಾಗಿದ್ದರೆ ಭಾರತದ ಭಾಷಾನೀತಿಯ ತೊಂದರೆಗಳೇನು? ಅದು ಯಾಕೆ ಬದಲಾಗಬೇಕು? ಈ ಬಗ್ಗೆ ಹತ್ತು ಮುಖ್ಯ ಪ್ರಶ್ನೋತ್ತರಗಳು ಇಲ್ಲಿವೆ. 

10 interesting facts about why Indians oppose Hindi imposition
Author
Bengaluru, First Published Sep 20, 2019, 1:52 PM IST

ದೇಶದೆಲ್ಲೆಡೆ ಹಿಂದಿ ಹರಡಲು ಶ್ರಮಿಸಿದ ಕೇಂದ್ರ ಸರ್ಕಾರಿ ನೌಕರರಿಗೆ ತೆರಿಗೆದಾರರ ಹಣದಲ್ಲಿ ಪ್ರತಿ ವರ್ಷ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡಲಾಗುತ್ತದೆ. ಹಲವು ಭಾಷೆಗಳ ನಾಡಿನಲ್ಲಿ ಪ್ರಭುತ್ವವು ಕೇವಲ ಒಂದು ಭಾಷೆಯ ಬೆನ್ನಿಗೆ ನಿಂತು, ಇನ್ನುಳಿದ ಭಾಷೆಗಳನ್ನು ಕಡೆಗಣಿಸುವ ಇಂತಹ ಆಚರಣೆ ಭಾಷಾವಾರು ಪ್ರಾಂತ್ಯಗಳ ಒಕ್ಕೂಟಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಪೂರಕವಾದ ವ್ಯವಸ್ಥೆಯಲ್ಲ. ಹಾಗಿದ್ದರೆ ಭಾರತದ ಭಾಷಾನೀತಿಯ ತೊಂದರೆಗಳೇನು? ಅದು ಯಾಕೆ ಬದಲಾಗಬೇಕು? ಈ ಬಗ್ಗೆ ಹತ್ತು ಮುಖ್ಯ ಪ್ರಶ್ನೋತ್ತರಗಳು ಇಲ್ಲಿವೆ.

ಹಿಂದಿ ಹೇರಿಕೆ: ಕನ್ನಡ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ!

1. ನಮ್ಮ ದೇಶದ ರಾಷ್ಟ್ರಭಾಷೆ ಹಿಂದಿಯಲ್ಲವೇ?

ಅಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಸಂವಿಧಾನ ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ.

2. ಶಾಲೆಗಳಲ್ಲಿ ನಮ್ಮ ರಾಷ್ಟ್ರಭಾಷೆ ಹಿಂದಿ ಎಂದು ಕಲಿಸಲಾಗುತ್ತಿದೆ. ಹಾಗಿದ್ದರೆ ಅದು ತಪ್ಪೇ?

ಹೌದು, ಶಾಲೆಗಳಲ್ಲಿ ಹೇಳಿಕೊಡುತ್ತಿರುವುದು ತಪ್ಪು ಮಾಹಿತಿ.

3. ಹಾಗಿದ್ದರೆ ಹಿಂದಿಗೆ ನಮ್ಮ ದೇಶದಲ್ಲಿ ಯಾವ ಸ್ಥಾನಮಾನವಿದೆ?

ಹಿಂದಿಯು ಇಂಗ್ಲಿಷ್‌ನ ಜೊತೆ ಕೇಂದ್ರ ಸರ್ಕಾರದ ಆಡಳಿತದ ಭಾಷೆ. ಅಧಿಕೃತ ಆಡಳಿತ ಭಾಷೆ ಹಿಂದಿಯಲ್ಲ. ಅಲ್ಲದೇ ಕೇಂದ್ರ ಸರ್ಕಾರ ಕೇವಲ ಹಿಂದಿ ಭಾಷಿಕರಿಗೆ ಸೇರಿದ್ದಲ್ಲ. ಅದರ ಆಡಳಿತ ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲಿ ನಡೆಯಬೇಕೇ ಹೊರತು, ಈಗಿನಂತೆ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಲ್ಲ.

ಹಿಂದಿ ಹೇರುವ ಮಾತಾಡಿಲ್ಲ, ಮಾತೃಭಾಷೆ ಆದ್ಯತೆ ಪ್ರತಿಪಾದಿಸಿದ್ದೇನೆ: ಅಮಿತ್ ಶಾ

4.ಹಿಂದಿ ಹೇರಿಕೆಯನ್ನು ಒಪ್ಪುವುದರಿಂದ ಕನ್ನಡಿಗರಿಗೆ ಏನು ತೊಂದರೆ?

ತ್ರಿಭಾಷಾ ಸೂತ್ರದಲ್ಲಿ ಹಿಂದಿ ಒಪ್ಪಿದ್ದ ಕನ್ನಡಿಗರಿಗೆ ಈಗ ಕನ್ನಡವನ್ನೇ ಕೈಬಿಟ್ಟು ಹಿಂದಿ ಅಥವಾ ಇಂಗ್ಲಿಷ್‌ ಇರುವ ದ್ವಿಭಾಷಾ ಸೂತ್ರ ಉಡುಗೊರೆಯಾಗಿ ಸಿಕ್ಕಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌, ವಿಮೆ ಕಂಪನಿ, ಅಂಚೆ, ರೈಲ್ವೆ, ವಿಮಾನ ನಿಲ್ದಾಣ, ಪಿಂಚಣಿ ವಿಭಾಗ, ಬಿಎಸ್‌ಎನ್‌ಎಲ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಲ್ಲಿ ಕನ್ನಡವನ್ನು ಹಂತ ಹಂತವಾಗಿ ಕೈಬಿಟ್ಟು, ಅಲ್ಲೆಲ್ಲಾ ಹಿಂದಿಯಲ್ಲಿ ಆಡಳಿತ ನಡೆಸುವ ಕೆಲಸ ಶುರುವಾಗಿದೆ. ಇಲ್ಲಿನ ಹೆಚ್ಚಿನ ಉದ್ಯೋಗಗಳು ಕನ್ನಡೇತರರ ಪಾಲಾಗುತ್ತಿವೆ.

5. ಭಾರತದ ಬಹುಸಂಖ್ಯಾತ ಜನರಿಗೆ ಹಿಂದಿ ಅರ್ಥವಾಗುತ್ತದೆ. ಹಾಗಿದ್ದ ಮೇಲೆ ಏಕೆ ರಾಷ್ಟ್ರ ಭಾಷೆಯಾಗಬಾರದು?

ಭಾರತದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಶೇ.40 ರಷ್ಟುಎನ್ನಲಾಗಿದೆ. ಆದರೆ ಸೂಕ್ಷ್ಮವಾಗಿ ನೋಡಿದರೆ ಭೋಜಪುರಿ, ಮೈಥಿಲಿ, ಹರ್ಯಾಣಿ, ಕನೋಜಿ, ಬೃಜಭಾಷಾ, ರಾಜಸ್ಥಾನಿ ಹೀಗೆ ಹಲವು ಪ್ರತ್ಯೇಕ ನುಡಿಗಳನ್ನೆಲ್ಲ ಹಿಂದಿಯ ಉಪ ಭಾಷೆಗಳು ಎನ್ನುವ ಹೊದಿಕೆಯಡಿ ತಂದು ಹಿಂದಿ ಭಾಷಿಕರ ಸಂಖ್ಯೆಯನ್ನು ಶೇ.40ಕ್ಕೆ ತಂದು ನಿಲ್ಲಿಸಿದ್ದಾರೆ. ಅಷ್ಟಕ್ಕೂ ಬಹು ಸಂಖ್ಯಾತರು ಈ ಭಾಷೆಯನ್ನು ಬಳಸುತ್ತಾರೆ ಅನ್ನುವ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರ ಭಾಷೆ ಕರೆಯುವುದು ಭಾರತದಂತಹ ಹಲವು ಭಾಷೆಗಳ ನಾಡಿಗೆ ಎಂದಿಗೂ ಒಪ್ಪಿಗೆಯಾಗದ ವಾದ.

ಹಿಂದಿ ಹೇರಿಕೆ ಮಾತ್ರವಲ್ಲ ತ್ರಿಭಾಷಾ ಸೂತ್ರವೂ ತೊಲಗಲಿ

6. ಇದು ಹಿಂದಿ ಭಾಷಿಕರ ಮೇಲಿನ ದ್ವೇಷವೇ?

ಅಲ್ಲ. ಹಿಂದಿ ಉಳಿಯಬೇಕು, ಬೆಳೆಯಬೇಕು. ಅದರ ಜೊತೆಗೆ ಹಿಂದಿಗಿಂತಲೂ ಹೆಚ್ಚು ಪ್ರಾಚೀನ ಮತ್ತು ಸಂಪದ್ಭರಿತವಾದ ಭಾರತದ ನುಡಿಗಳ ಉಳಿವು, ಬೆಳೆವು ಕೂಡ ಅಷ್ಟೇ ಮುಖ್ಯ. ಹಾಗಾಗಿ ಭಾರತದ ಎಲ್ಲ ಭಾಷೆಗಳನ್ನು ಸಮಾನವೆಂದು ಕಾಣುವ ಭಾಷಾ ನೀತಿ ಬರಬೇಕು.

7.ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿವೆ. ಎಲ್ಲಾ ಭಾಷೆಗಳನ್ನು ಆಡಳಿತದಲ್ಲಿ ಬಳಸುವುದು ಹೇಗೆ?

ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲಾ ಕಚೇರಿಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ಬಳಕೆ ಮಾಡಬೇಕು. ಭಾರತದ ನುಡಿವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನುಡಿಗಳೂ ಉಳಿದು ಬೆಳೆಯುವ ರೀತಿಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಮುಂದುವರಿದಿರುವ ಈ ದಿನಗಳಲ್ಲಿ ಒಂದು ಭಾಷಾ ನೀತಿ ರೂಪಿಸುವುದು ಅಸಾಧ್ಯವೇನಲ್ಲ. 5 ಕೋಟಿ ಜನಸಂಖ್ಯೆ ಇರುವ ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಲ್ಲಿರುವ 11 ಭಾಷೆಗಳನ್ನೂ ಅಧಿಕೃತ ಆಡಳಿತ ಭಾಷೆಗಳೆಂದು ಕರೆಯುವಾಗ, 130 ಕೋಟಿ ಜನರ ಭಾರತಕ್ಕೆ ಇದು ಅಸಾಧ್ಯವೇನಲ್ಲ.

8. ಈ ಸಮಸ್ಯೆಗೆ ಪರಿಹಾರವೇನು?

ಹಿಂದಿ ಭಾಷೆಗೆ ಮಾತ್ರ ಹೆಚ್ಚುಗಾರಿಕೆ ಕೊಡುತ್ತಿರುವ ಕೇಂದ್ರ ಸರ್ಕಾರ ತನ್ನ ನಿಲುವುಗಳನ್ನು ಬದಲಾಯಿಸಿಕೊಂಡು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡಿ ಭಾಷಾಸಮಾನತೆಗೆ ಒತ್ತು ನೀಡಬೇಕು.

9.ಇದು ಹಿಂದಿಯೇತರ ಜನರ ಹೋರಾಟವೇ?

ಅಲ್ಲ. ಇದು ಹಿಂದಿಯೇತರರೊಬ್ಬರ ಹೋರಾಟವಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣದಂತಿರುವ ಈ ನೀತಿಯನ್ನು ಬದಲಾಯಿಸುವಲ್ಲಿ ಹಿಂದಿ ಭಾಷಿಕರದ್ದೂ ಪಾತ್ರವಿದೆ. ಭಾರತದ ಇತರ ಭಾಷೆಯ ಜನರಿಗಾಗುತ್ತಿರುವ ತಾರತಮ್ಯ ಅವರ ಆತ್ಮಸಾಕ್ಷಿಯನ್ನು ಕಲಕಬೇಕು.

10. ನಾವು ಹೇಗೆ ಕೈ ಜೋಡಿಸಬಹುದು?

ಕೇಂದ್ರದ ಭಾಷಾ ನೀತಿ ಬದಲಾಯಿಸಿ, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ತಕ್ಷಣ ಘೋಷಿಸುವಂತೆ ಪ್ರಧಾನÜÜಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರಬರೆಯುವ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸಿ ಭಾಷಾ ಸಮಾನತೆಯ ಕೂಗಿಗೆ ಪ್ರತಿಯೊಬ್ಬರೂ ದನಿಯಾಗಬಹುದು.

ಭಾಷಾ ಸೂತ್ರವೆಂಬ ಹಿಂದಿ ಹೇರಿಕೆಯ ಅಸ್ತ್ರದ ಬಗ್ಗೆ ಕನ್ನಡದ ಆತ್ಮಸಾಕ್ಷಿಯಂತಿದ್ದ ರಾಷ್ಟ್ರಕವಿ ಕುವೆಂಪು ಹೀಗೆ ಹೇಳಿದ್ದರು:

ಭಾಷಾ ತ್ರಿಶೂಲವೀ ತ್ರಿಭಾಷಾಸೂತ್ರ

ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!

ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರುಗಾಳ

ನುಂಗದಿದ್ದರೆ ಹಸಿವೆ: ನುಂಗಿದರೆ ಪ್ರಾಣಶೂಲ!

Follow Us:
Download App:
  • android
  • ios