ನವದೆಹಲಿ: ದೇಶದ ಯಾವುದೇ ನಾಗರಿಕರ ದೂರವಾಣಿ ಕರೆಗಳನ್ನು ಆಲಿಸುವ, ಇ-ಮೇಲ್‌ಗಳಲ್ಲಿನ ಮಾಹಿತಿ ತಿಳಿಯುವ ಅಧಿಕಾರ ಹೊಂದಿದ್ದ ಕೇಂದ್ರ ಸರ್ಕಾರ ಈಗ ಯಾವುದೇ ಪ್ರಜೆ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಕದ್ದು ನೋಡುವ, ಕೇಳಿ ವಶಕ್ಕೆ ಪಡೆಯುವ, ಅದರಲ್ಲಿನ ರಹಸ್ಯ ಮಾಹಿತಿಯನ್ನು ಭೇದಿಸುವ ಅಧಿಕಾರವನ್ನು ಸಿಬಿಐ, ಎನ್‌ಐಎ ಸೇರಿ 10 ಕೇಂದ್ರೀಯ ಸಂಸ್ಥೆಗಳಿಗೆ ನೀಡಿ ರಾತ್ರೋರಾತ್ರಿ ಆದೇಶ ಹೊರಡಿಸಿದೆ.

ಇದು ವಿವಾದದ ಬಿರುಗಾಳಿ ಎಬ್ಬಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಇದೊಂದು ಅಸಂವಿಧಾನಿಕ, ಪ್ರಜಾಸತ್ತೆ ವಿರೋಧಿ ನಿರ್ಧಾರ. ಮೂಲಭೂತ ಹಕ್ಕುಗಳ ಮೇಲಿನ ಪ್ರಹಾರ. ಅಘೋಷಿತ ತುರ್ತು ಪರಿಸ್ಥಿತಿ ಎಂದೆಲ್ಲಾ ಹರಿಹಾಯ್ದಿವೆ. ರಾಜ್ಯಸಭೆಯಲ್ಲೂ ಈ ವಿಷಯ ಗದ್ದಲಕ್ಕೆ ಕಾರಣವಾಗಿದೆ. ಆದರೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2009ರಲ್ಲಿ ರೂಪಿಸಿದ್ದ ನಿಯಮವನ್ನು ನಾವು ಜಾರಿಗೆ ತಂದಿದ್ದೇವೆ. ಪ್ರತಿಪಕ್ಷಗಳು ಬೆಟ್ಟಅಗೆದು ಇಲಿ ಹಿಡಿಯುತ್ತಿವೆ. ಆದರೆ ಅವುಗಳಿಗೆ ಇಲಿಯೂ ಸಿಗುವುದಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ವ್ಯಂಗ್ಯವಾಡಿದ್ದಾರೆ.

ಕದ್ದುನೋಡುವ ಅಧಿಕಾರ:

ನಾಗರಿಕರ ದೂರವಾಣಿ ಸಂಭಾಷಣೆ ಹಾಗೂ ಇ-ಮೇಲ್‌ಗಳ ಮೇಲೆ ನಿಗಾ ಇಡುವ ಅಧಿಕಾರ ಗೃಹ ಸಚಿವಾಲಯಕ್ಕೆ ಇದೆ. ಆದರೆ ಇದೀಗ ಗುಪ್ತಚರ ದಳ, ಮಾದಕ ವಸ್ತು ನಿಯಂತ್ರಣ ದಳ, ಜಾರಿ ನಿರ್ದೇಶನಾಲಯ, ಕೇಂದ್ರೀಯ ನೇರ ತೆರಿಗೆ ಮಂಡಳಿ, ಕಂದಾಯ ಸರ್ವೇಕ್ಷಣಾ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಸಂಪುಟ ಕಾರ್ಯದರ್ಶಿ (ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ-ರಾ), ಸಿಗ್ನಲ್‌ ಇಂಟಲೆಜೆನ್ಸ್‌ ನಿರ್ದೇಶನಾಲಯ (ಜಮ್ಮು-ಕಾಶ್ಮೀರ, ಈಶಾನ್ಯ ಭಾರತ ಹಾಗೂ ಅಸ್ಸಾಂನಲ್ಲಿ ಮಾತ್ರ) ಹಾಗೂ ದೆಹಲಿ ಪೊಲೀಸ್‌ ಆಯುಕ್ತರಿಗೆ ದೇಶದ ಯಾವುದೇ ಕಂಪ್ಯೂಟರ್‌ನಲ್ಲಿನ ಮಾಹಿತಿ ಭೇದಿಸಲು, ನಿಗಾ ಇಡಲು, ವಶಕ್ಕೆ ಪಡೆಯಲು ಅಧಿಕಾರವನ್ನು ದಯಪಾಲಿಸಿದೆ. ಈ ಕುರಿತು ಗುರುವಾರ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಗುರುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಇದರಿಂದಾಗಿ ದೇಶದ ನಾಗರಿಕರು ತಮ್ಮ ಕಂಪ್ಯೂಟರ್‌ನಲ್ಲಿ ಸೃಷ್ಟಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಸಂಗ್ರಹಿಸಿಡುವ ಯಾವುದೇ ಮಾಹಿತಿಯನ್ನು ಭೇದಿಸುವ, ನಿಗಾ ಇಡುವ, ಗೂಢಲಿಪಿಗಳನ್ನು ಭೇದಿಸುವ ಅಧಿಕಾರ 10 ತನಿಖಾ ಸಂಸ್ಥೆಗಳಿಗೆ ಸಿಕ್ಕಿದಂತಾಗಿದೆ. ಅಧಿಕಾರಿಗಳು ಅಗತ್ಯ ಬಿದ್ದರೆ, ಯಾವುದೇ ಕಂಪ್ಯೂಟರ್‌ ಅನ್ನು ವಶಕ್ಕೆ ಪಡೆಯಬಹುದಾಗಿದೆ. ತನಿಖಾಧಿಕಾರಿಗಳು ಕೇಳಿದಾಗ ಕಂಪ್ಯೂಟರ್‌ ಮಾಲೀಕರೇ ಆಗಲಿ, ಸೇವಾದಾತ ಸಂಸ್ಥೆಯಾಗಲೀ ಸಹಕಾರ ಕೊಡಬೇಕಾಗುತ್ತದೆ. ಇಲ್ಲದಿದ್ದರೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದೇ ಮೊದಲು:

ಒಂದು ಕಂಪ್ಯೂಟರ್‌ನಿಂದ ಮತ್ತೊಂದು ಕಂಪ್ಯೂಟರ್‌ಗೆ ಕಳುಹಿಸಲಾಗುವ ಸಂದೇಶಗಳ ಮೇಲೆ ನಿಗಾ ಇಡಲು ವಿವಿಧ ತನಿಖಾ ಸಂಸ್ಥೆಗಳಿಗೆ ಸಾಮಾನ್ಯವಾಗಿ ಅಧಿಕಾರ ಇರುತ್ತದೆ. ಆದರೆ ಒಂದು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಟ್ಟಿರುವ ಮಾಹಿತಿಯನ್ನು ಕದ್ದುನೋಡುವ ಅಧಿಕಾರ ನೀಡುತ್ತಿರುವುದು ಇದೇ ಮೊದಲು ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್‌ 69(1)ರಡಿ ಈ ಆದೇಶ ಹೊರಡಿಸಲಾಗಿದೆ. ದೇಶದ ಸಾರ್ವಭೌಮತೆ ಅಥವಾ ಐಕತ್ಯತೆ, ರಕ್ಷಣೆ, ಭದ್ರತೆ ಮತ್ತಿತರ ಕಾರಣಗಳಿಗಾಗಿ ಮಾಹಿತಿ ಭೇದಿಸಲು ಕೇಂದ್ರ ಸರ್ಕಾರ ಯಾವುದೇ ತನಿಖಾ ಸಂಸ್ಥೆಗಳಿಗೆ ಅಧಿಕಾರ ನೀಡಬಹುದು ಎಂದು ಆ ಕಾಯ್ದೆ ಹೇಳುತ್ತದೆ.

ಪ್ರತಿಪಕ್ಷಗಳು ಗರಂ:  ಕೇಂದ್ರ ಸರ್ಕಾರದ ಈ ಆದೇಶಕ್ಕೆ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಿರ್ಧಾರವನ್ನು ಸಾಮೂಹಿಕವಾಗಿ ವಿರೋಧಿಸುವುದಾಗಿ ಸಿಪಿಎಂ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ತೃಣಮೂಲ ಕಾಂಗ್ರೆಸ್‌ ಘೋಷಿಸಿವೆ. ಮೋದಿ ಸರ್ಕಾರ ಈಗ ಕಿರುಕುಳದ ಸರ್ಕಾರವಾಗಿದೆ. ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿಯು ಮಾಹಿತಿಗಾಗಿ ಹತಾಶವಾಗಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ರಾಜ್ಯಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಕಾಂಗ್ರೆಸ್ಸಿನ ಆನಂದ ಶರ್ಮಾ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಘೋಷಿತ ತುರ್ತುಪರಿಸ್ಥಿತಿಯ ಅಂತಿಮ ರೂಪು ಪಡೆಯುತ್ತಿದೆ. ಎಲ್ಲಾ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಪರಮಾಧಿಕಾರ ನೀಡಲಾಗಿದೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಬಿಜೆಪಿ ಮಾಲೀಕತ್ವ ಪಡೆದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಚಿವ ಅರುಣ್‌ ಜೇಟ್ಲಿ, ಮಾಹಿತಿ ಪಡೆದು ಮಾತನಾಡಿ. 2009ರಲ್ಲಿ ಯುಪಿಎ ಸರ್ಕಾರವೇ ಈ ನಿಯಮ ರೂಪಿಸಿತ್ತು. ಅದೇ ನಿಯಮಗಳಡಿ ತನಿಖಾ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ ಎಂದಿದ್ದಾರೆ. ಈ ನಡುವೆ ದೇಶದ ಭದ್ರತೆಯ ನಿಟ್ಟಿನಲ್ಲಿ ಹೊರಡಿಸಲಾಗಿರುವ ಆದೇಶ, ಎಲ್ಲಾ ಕಾನೂನಾತ್ಮಕ ರಕ್ಷಣಾ ಕ್ರಮಗಳನ್ನು ಒಳಗೊಂಡಿದೆ. ವಿಷಯದ ಸೂಕ್ತ ಅರಿವಿಲ್ಲದೇ ವಿಪಕ್ಷಗಳು ಸುಮ್ಮನೆ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಬಿಜೆಪಿ, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದೆ.