ಬೆಂಗಳೂರು (ಸೆ. 29): ಎಟಿಎಂ ಘಟಕಗಳಿಗೆ ಹಣ ಪೂರೈಸುವ ಖಾಸಗಿ ಏಜೆನ್ಸಿಯೊಂದರ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ₹ 99 ಲಕ್ಷ ದೋಚಿ ಪರಾರಿಯಾದ ಘಟನೆ ಎಚ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ.

ರೈಟರ್ಸ್‌ ಸೇಫ್ ಏಜೆನ್ಸಿ ವಾಹನ ಚಾಲಕ ಮಂಡ್ಯದ ಪವನ್ ತಪ್ಪಿಸಿಕೊಂಡಿದ್ದು, ಕೃತ್ಯ ಸಂಬಂಧ ಏಜೆನ್ಸಿ ನೌಕರರಾದ ದಯಾನಂದ್, ಮುಕೇಶ್, ಆನಂದ್ ಹಾಗೂ ಬಾಬು ರೆಡ್ಡಿನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ತಪ್ಪಿಸಿಕೊಂಡ ಚಾಲಕ: ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ಸರಬರಾಜು ಗುತ್ತಿಗೆಯನ್ನು ರೈಟರ್ಸ್‌ ಏಜೆನ್ಸಿ ಪಡೆದಿದೆ. ಈ ಹಣ ಪೂರೈಕೆಗೆ ಏಜೆನ್ಸಿ ಸಿಬ್ಬಂದಿಗಳಾದ ದಯಾನಂದ್, ಬಾಬು ರೆಡ್ಡಿ, ಮುಕೇಶ್ ಹಾಗೂ ಆನಂದ್ ಜತೆ ಪವನ್, ಶುಕ್ರವಾರ ಬಾಣಸವಾಡಿ ವ್ಯಾಪ್ತಿಯ ಎಟಿಎಂಗಳಿಗೆ ಹಣ ಪೂರೈಕೆ ಬಂದಿದ್ದ. ಮೊದಲು ಬಾಣಸವಾಡಿ ಬಳಿ ಎಟಿಎಂ ಕೇಂದ್ರಕ್ಕೆ ಹಣ ತುಂಬಿದ ಅವರು, ಬಳಿ  ಮಧ್ಯಾಹ್ನ
4.30 ರ ಸುಮಾರಿಗೆ ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಬಂದಿದ್ದಾರೆ.

ಆ ವೇಳೆ ಕಸ್ಟೋಡಿಯನ್ ಆನಂದ್ ಹಾಗೂ ಗನ್ ಮ್ಯಾನ್‌ಗಳಾದ ದಯಾನಂದ್, ಬಾಬು ರೆಡ್ಡಿ, ಮುಕೇಶ್ ಅವರುಹಣ ತುಂಬಲು ವಾಹನದಿಂಳಿದಿದ್ದಾರೆ. ಆ ವೇಳೆ ಕಾರಿನಲ್ಲಿದ್ದ ಚಾಲಕ, ವಾಹನದೊಂದಿಗೆ ಉಳಿದ ಹಣದ ಸಮೇತ ಪರಾರಿಯಾಗಿದ್ದಾನೆ. ತಕ್ಷಣವೇ ಗನ್‌ಮ್ಯಾನ್‌ಗಳು, ಪವನ್ ಬೆನ್ನ ಹತ್ತಿದ್ದಾರೆ. ಆದರೆ ಶರವೇಗದಲ್ಲಿ ಆತ ತಪ್ಪಿಸಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಲಿಂಗರಾಜಪುರ ಸಮೀಪ ವಾಹನ ನಿಲ್ಲಿಸಿದ ಪವನ್, ಅದರಲ್ಲಿದ್ದ ₹99 ಲಕ್ಷ ನಗದು ತುಂಬಿದ್ದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ಆದರೆ ಕಾರಿನಲ್ಲಿ ₹1 ಕೋಟಿ ಹಣವಿದ್ದ ಲಾಕರ್‌ಗಳನ್ನು ಒಡೆಯಲು ಚಾಲಕ ವಿಫಲ ಯತ್ನ ನಡೆಸಿದ್ದಾನೆ.

ಘಟನೆ ಕುರಿತು ತನ್ನ ಏಜೆನ್ಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಆನಂದ್, ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿದ ಬಾಣಸವಾಡಿ ಠಾಣೆ ಪೊಲೀಸರು, ಎಟಿಎಂ ಕೇಂದ್ರ ಹಾಗೂ ವಾಹನ ಬಿಟ್ಟು ಹೋದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.