ಇಸ್ತಾಂಬುಲ್(ಆ.9): ಚೀನಾ ಮಹಾಗೋಡೆ ಎಲ್ಲಿ ಅಂತಾ ಶಾಲಾ ಮಕ್ಕಳಿಗೆ ಕೇಳಿ ನೋಡಿ. ಏನ್ರೀ ಚೀನಾ ಹೆಸರು ಹೇಳಿ ಪ್ರಶ್ನೇ ಕೇಳ್ತಿರಲ್ಲಾ ಅಂತಾ ಮುಖಕ್ಕೆ ಹೊಡೆದಂತೆ ಉತ್ತರ ಕೊಡುತ್ತವೆ. ಆದರೆ ಟರ್ಕಿ ದೇಶದ ‘ಕೌನ್ ಬನೇಗಾ ಕರೋಡ್ ಪತಿ’ಯ ಅವತರಣಿಕೆಯಲ್ಲಿ ಮಹಿಳಾ ಸ್ಪರ್ಧಿಯೋರ್ವಳು 2 ಲೈಫ್‌ಲೈನ್ ಬಳಿಸಿ ಟ್ರೋಲ್‌ಗೆ ಒಳಗಾಗಿದ್ದಾಳೆ.

ಹೌದು, 26 ವರ್ಷದ ಸು ಅಯಾನ್ ಎಂಬ ಯುವತಿ ಟರ್ಕಿಯ ಕರೋಡ್ ಪತಿ ಅವತರಣಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಈಕೆಗೆ ಚೀನಾದ ಮಹಾಗೋಡೆ ಎಲ್ಲಿದೆ ಅಂತಾ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ 4 ಆಯ್ಕೆಗಳನ್ನು ಕೊಡಲಾಗಿತ್ತು. ಈ ಆಯ್ಕೆಗಳಲ್ಲಿ  ಚೀನಾ, ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳಿದ್ದವು.

ಈ ಪ್ರಶ್ನೆಗೆ ಉತ್ತರ ಕೊಡಲು ತಡಕಾಡಿದ ಸು ಅಯಾನ್, ಕೊನೆಗೆ 2 ಲೈಫ್‌ಲೈನ್ ಸಹಾಯ ಪಡೆದು ಉತ್ತರ ನೀಡಿದ್ದಾಳೆ. ಆಶ್ಚರ್ಯ ಎಂದರೆ ಪ್ರಶ್ನೆಯಲ್ಲೇ ಚೀನಾ ದೇಶದ ಉಲ್ಲೇಖವಿದ್ದು, ಇದೂ ಕೂಡ ಮಹಿಳಾ ಸ್ಪರ್ಧಿಗೆ ಗೊತ್ತಾಗಿಲ್ಲ. ಸು ಅಯಾನ್ ಈ ಪ್ರಶ್ನೆಗೆ ಉತ್ತರ ಕೊಡಲು ಆಡಿಯನ್ಸ್ ಪೋಲ್ ಮತ್ತು ಫೋನ್ ಆಫ್ ಫ್ರೆಂಡ್ ಎರಡೂ ಲೈಫ್‌ಲೈನ್ ಬಳಸಿಕೊಂಡಿದ್ದಾಳೆ. ಅಂದಹಾಗೆ ಸು ಅಯಾನ್ ಅರ್ಥಶಾಸ್ತ್ರ ಪದವಿಧರೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು.