ಭಾರತವನ್ನು ಜೈಲಾಗಿ ಪರಿವರ್ತಿಸಿದ್ದ ಇಂದಿರಾಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿಇಂದಿನ ಯುವಜನತೆಗೆ ತುರ್ತು ಪರಿಸ್ಥಿತಿ ಅರಿವಿಲ್ಲಮುಂಬೈನಲ್ಲಿ ಬಿಜೆಪಿಯಿಂದ ಕರಾಳ ದಿನಾಚರಣೆ
ಮುಂಬೈ(ಜೂ.26): ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಕುಟುಂಬದ ಸ್ವಾರ್ಥ ವೈಯಕ್ತಿಕ ಸ್ವಹಿತಾಸಕ್ತಿಗಾಗಿ ಭಾರತವನ್ನು ಜೈಲಾಗಿ ಪರಿವರ್ತಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಇಂದು ಮುಂಬೈನಲ್ಲಿ ಬಿಜೆಪಿ ಆಯೋಜಿಸಿದ್ದ ತುರ್ತುಪರಿಸ್ಥಿತಿಯ 43ನೇ ಕರಾಳ ದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೇರಿದ್ದ 1975ರ ತುರ್ತುಪರಿಸ್ಥಿತಿಯ ವಾರ್ಷಿಕೋತ್ಸವವನ್ನು ಬಿಜೆಪಿ ಕರಾಳ ದಿನವನ್ನಾಗಿ ಆಚರಿಸುತ್ತಿರುವುದು ಕೇವಲ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಲ್ಲ. ಬದಲಿಗೆ ಯುವ ಜನರಲ್ಲಿ ಅಂದಿನ ದಿನ ನಿಜಕ್ಕೂ ಏನಾಗಿತ್ತು ಎಂಬುದರ ಅರಿವು ಮೂಡಿಸಲು ಎಂದು ಹೇಳಿದರು.
ತುರ್ತುಪರಿಸ್ಥಿತಿಯ ಆ ದಿನಗಳಲ್ಲಿ ಏನು ನಡೆದಿತ್ತು ಎಂಬುದರ ಬಗ್ಗೆ ಇಂದಿನ ಯುವಕರಿಗೆ ಅರಿವು ಇಲ್ಲ. ಆಗ ಜನ ಸ್ವಾತಂತ್ರ್ಯವಿಲ್ಲದೆ ಹೇಗೆ ಇದ್ದರು ಎಂಬುದೂ ಗೊತ್ತಿಲ್ಲ. ಕಾಂಗ್ರೆಸ್ ಅಂದು ಹೇರಿದ್ದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸಿದೆ. ಇದೊಂದು ಪಾಪದ ಕೆಲಸ. ಸಂವಿಧಾನದ ದುರ್ಬಳಕೆ ಮಾಡಿಕೊಂಡ ದಿನ ಇದು ಎಂದು ಪ್ರಧಾನಿ ಮೋದಿ ಕಟುವಾಗಿ ಟೀಕಿಸಿದರು.
ನಮ್ಮ ಈ ಕಾರ್ಯಕ್ರಮದ ಮೂಲಕ ಅವತ್ತಿನ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದವರಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಆಂತರಿಕವಾಗಿಯೇ ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಅಂದ ಮೇಲೆ ದೇಶದ ಪ್ರಜಾಪ್ರಭುತ್ವ ರಕ್ಷಣೆ ಮಾಡುತ್ತದೆ ಎಂದು ಹೇಗೆ ನಿರೀಕ್ಷಿಸುವುದು? ಎಂದು ಪ್ರಧಾನಿ ಪ್ರಶ್ನಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಾಯಕ ಕಿಶೋರ್ ಕುಮಾರ್ ಅವರು ಕಾಂಗ್ರೆಸ್ ಪರವಾಗಿ ಹಾಡಲು ನಿರಾಕರಿಸಿದ್ದಕ್ಕೆ ಅವರ ಹಾಡುಗಳನ್ನು ದೇಶಾದ್ಯಂತ ನಿರ್ಬಂಧಿಸಲಾಯಿತು ಎಂದರು.
ಹಿರಿಯ ಪತ್ರಕರ್ತರಾದ ಕುಲದೀಪ್ ನೈಯರ್ ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದವರಲ್ಲಿ ಒಬ್ಬರು. ನಮ್ಮೆಲ್ಲರನ್ನೂ ಟೀಕಿಸಿದ್ದಾರೆ. ಆದರೆ, ನಾನು ಈ ಸಮಯದಲ್ಲಿ ಅವರಿಗೆ ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಸ್ವಾರ್ಥ ಹಿತಾಸಕ್ತಿಗಾಗಿ ಕಾಂಗ್ರೆಸ್ ದೇಶವನ್ನು ಒಂದು ಜೈಲಾಗಿ ಪರಿವರ್ತಿಸಿತ್ತು. ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸಿದ್ದರು. ಅವರಿಗೆ ದೇಶ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ ಎಂದು ಮೋದಿ ಹರಿಹಾಯ್ದಿದ್ದಾರೆ.
