ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ 9 ವರ್ಷಗಳ ನಂತರ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಸಾಲ, ಆರ್‌ಸಿಬಿ ಖರೀದಿ, ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಪತನ, ಮತ್ತು ಭಾರತಕ್ಕೆ ಮರಳುವ ಬಯಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ. 

ಭಾರತದಲ್ಲಿ ಕೋಟ್ಯಂತರ ಮೌಲ್ಯದ ಹಣ ಧೋಖಾ ಮಾಡಿ ಲಂಡನ್‌ಗೆ ಪರಾರಿಯಾಗಿದ್ದ ಲಿಕ್ಕರ್‌ ದೊರೆ ವಿಜಯ್‌ ಮಲ್ಯ 9 ವರ್ಷಗಳಿಂದ ತಮ್ಮ ಭೂಗತ ನಿವಾಸ ಬಿಟ್ಟು ಆಚ ಬಂದ ಇರಲಿಲ್ಲ. ಇದೀಗ ಸಾರ್ವಜನಿಕವಾಗಿ, ಅಂದರೆ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ತಾವು ಐಪಿಎಲ್‌ ತಂಡ ಖರೀದಿಸಿ ಆರ್‌ಸಿಬಿ ಎಂದು ಹೆಸರು ಇಟ್ಟದ್ದು ಯಾಕೆ ಅಂತಲೂ ಹೇಳಿದ್ದಾರೆ. ʼಭಾರತಕ್ಕೆ ಬಂದೇನು, ಆದರೆ...ʼ ಎಂದಿದ್ದಾರೆ. ಮುಖ್ಯವಾಗಿ, ಇಷ್ಟು ವರ್ಷಗಳು ಇಲ್ಲದ ವಿಜಯ್‌ ಮಲ್ಯ ಈಗ ಕಾಣಿಸಿಕೊಂಡದ್ದು ಯಾಕೆ? ಆರ್‌ಸಿಬಿ ಗೆಲುವೇ ಇದಕ್ಕೆ ಕಾರಣವಾ ಅಂತಲೂ ಊಹೆಗಳು ಮೂಡಿವೆ.

ಭಾರತದಲ್ಲಿ ʼಆರ್ಥಿಕ ಅಪರಾಧಿʼ ಎಂದು ಕರೆಸಿಕೊಂಡಿದ್ದಾರೆ ಮಲ್ಯ. ಅವರು ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಲಂಡನ್‌ನಲ್ಲಿ ಅಡಗಿ ಕೂತಿರುವ ಮಲ್ಯ ಅವರನ್ನು ಯೂಟ್ಯೂಬರ್ ರಾಜ್ ಶಾಮನಿ ಸಂದರ್ಶನ ಮಾಡಿದ್ದು, ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ವಿಜಯ್ ಮಲ್ಯ ತಮ್ಮ ಸಾಲ, ತಮ್ಮನ್ನು ʼಚೋರʼ ಎಂದು ಯಾಕೆ ಕರೆಯಲಾಗುತ್ತಿದೆ, ತನ್ನ ಲೈಫ್‌ಸ್ಟೈಲ್‌ ಯಾವುದು, ಆರ್‌ಸಿಬಿಯನ್ನು ಖರೀದಿ ಮಾಡಿದ್ದರ ಅಸಲಿ ಕಾರಣವೇನು, ತಾನು ಭಾರತದಲ್ಲಿ ಅತಿದೊಡ್ಡ ಮದ್ಯ ಸಾಮ್ರಾಜ್ಯವನ್ನು ನಿರ್ಮಿಸಿದ್ದು ಹೇಗೆ, ಕಿಂಗ್‌ಫಿಷರ್ ಏರ್‌ಲೈನ್ಸ್‌ ಮುಳುಗಲು ಏನು ಕಾರಣ, ಭಾರತ ದೇಶವನ್ನು ತೊರೆದು ಓಡಿದ್ದು ಏಕೆ, ಎಂದಾದರೂ ಹಿಂತಿರುಗುವ ಆಸೆ ಇದೆಯಾ, ₹14,400 ಕೋಟಿ ಹಣವನ್ನು ತಾನು ಕ್ಲಿಯರ್‌ ಮಾಡಿದ್ದು ಹೇಗೆ, ಪ್ರಸ್ತುತ ಆದಾಯ, ಆಸ್ತಿಗಳು, ಕಾನೂನು ಹೋರಾಟಗಳು- ಇದನ್ನೆಲ್ಲ ಮಾತಾಡಿದ್ದಾರೆ.

ಬಹಳ ಮಂದಿ, ಈಗಲೂ ಆರ್‌ಸಿಬಿ ಮಾಲಿಕ ವಿಜಯ್‌ ಮಲ್ಯ ಎಂದು ನಂಬಿಕೊಂಡಿದ್ದಾರೆ. ಆದರೆ ಆರ್‌ಸಿಬಿಯನ್ನು ಮೊದಲ ಬಾರಿಗೆ ಕೊಂಡುಕೊಂಡವರಷ್ಟೇ ವಿಜಯ್‌ ಮಲ್ಯ. ತದನಂತರ ಇವರ ನಷ್ಟದಲ್ಲಿದ್ದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಅನ್ನು ಡಿಯಾಜಿಯೊ ಸಂಸ್ಥೆ ಖರೀದಿಸಿದಾಗ, ಆರ್‌ಸಿಬಿಯನ್ನೂ ಖರೀದಿಸಿತು. ಇದರಲ್ಲಿ ವಿಜಯ್‌ ಮಲ್ಯ ಶೇರುಗಳು ಅತ್ಯಲ್ಪ. ಹೀಗಾಗಿ ನಿಜ ಮಾಲೀಕ ಮಲ್ಯ ಅಲ್ಲ. ಆದರೂ ಐಪಿಎಲ್‌ ಮೊದಲ ಬಾರಿಗೆ ಹುಟ್ಟಿದಾಗ, ಬೆಂಗಳೂರಿಗೆ ಒಂದು ತಂಡವನ್ನು ಖರೀದಿಸಿ ತಂದು ಆರ್‌ಸಿಬಿ ಎಂದು ಹೆಸರು ಕೊಟ್ಟವರು ವಿಜಯ್‌ ಮಲ್ಯ ಎಂಬ ಕಾರಣಕ್ಕಾಗಿ ಸ್ಮರಿಸಲ್ಪಡುತ್ತಾರೆ.

ಕಿಂಗ್‌ಫಿಶರ್‌ ಹಾಗೂ ರಾಯಲ್ ಚಾಲೆಂಜರ್ಸ್ ಬಿಯರ್ ಬ್ರ್ಯಾಂಡ್‌ಗಳಿಗೆ ಮಾರ್ಕೆಟಿಂಗ್‌ ತಂತ್ರಗಳನ್ನು ಹುಡುಕುತ್ತಿದ್ದಾಗ ಮಲ್ಯಗೆ ಕಾಣಿಸಿದ್ದು ಐಪಿಎಲ್‌ ಬಿಡ್ಡಿಂಗ್.‌ ಅವರು ಮುಂಬೈ ಸೇರಿದಂತೆ ಮೂರು ತಂಡಗಳಿಗೆ ಬಿಡ್ಡಿಂಗ್‌ ಮಾಡಿದ್ದರಂತೆ. ಆದರೆ ಮುಂಬಯಿ ತಂಡವನ್ನು ಅಂಬಾನಿ ಕೊಂಡುಕೊಂಡರು. ಬೆಂಗಳೂರು ತಂಡವನ್ನು ಮಲ್ಯ ಆಯ್ದುಕೊಂಡು ಆರ್‌ಸಿಬಿ ಎಂದು ಹೆಸರಿಟ್ಟರು. ಹೀಗಾಗಿ, ವಿಜಯ್ ಮಲ್ಯ ಆರ್‌ಸಿಬಿಯನ್ನು ಕೊಂಡದ್ದು ಬೆಂಗಳೂರು ಮೇಲಿನ ಪ್ರೀತಿಗೋ, ಕ್ರಿಕೆಟ್ ಮೇಲಿನ ಕ್ರೇಜ್‌ಗಾಗಿಯೋ ಅಲ್ಲ. ಬದಲಾಗಿ ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡುವುದಕ್ಕೆ. ಆಗ 600 ಕೋಟಿ ರೂಪಾಯಿ ಕೊಟ್ಟು ಆರ್‌ಸಿಬಿ ತಂಡವನ್ನು ಅವರು ಖರೀದಿಸಿದ್ದರು.

"9 ವರ್ಷಗಳ ನಂತರ ಯಾಕೆ ಸಂದರ್ಶನ ಕೊಡ್ತಿದೀರಿ?" ಅಂತ ಕೇಳಿದ ಪ್ರಶ್ನೆಗೆ ಮಲ್ಯ ಹೇಳಿದ್ದು- "ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯ ಬಹಳ ಬೇಗನೆ ಕ್ರಿಯೇಟ್‌ ಆಗುತ್ತೆ. ಮೀಡಿಯಾದಿಂದ ಅದು ನಿರ್ಧಾರಾಗುತ್ತೆ. ನಾನು ಹಣಕಾಸು ಕಳ್ಳ ಅಂತ ಆಗಿದ್ದೂ ಹಾಗೇ" ಎಂದ ಮಲ್ಯ, ಈಗ ಮೀಡಿಯಾ ಮೂಲಕವೇ ತಾನು ಪ್ರಾಮಾಣಿಕ, ಸಾಲದ ಹಣವನ್ನೆಲ್ಲ ಮರಳಿ ಕೊಟ್ಟಿದ್ದೇನೆ, ಆದರೂ ತನ್ನನ್ನು ಕಳ್ಳ ಎನ್ನಲಾಗುತ್ತಿದೆ ಎಂದು ಸಾರಲು ಮುಂದಾಗಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಇನ್ನಷ್ಟು ಮೀಡಿಯಾಗಳಿಗೆ ಅವರು ಸಂದರ್ಶನ ಕೊಡಬಹುದು. ಅಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಬಹುದು. ಆರ್‌ಸಿಬಿ ಗೆಲುವಿನಿಂದಾಗಿ ಹುಟ್ಟಿದ ಕ್ರೇಜ್‌ ಅನ್ನು ಅವರು ನಗದೀಕರಿಸಿಕೊಳ್ಳಬಹುದು ಎಂದು ಭಾವಿಸಿಕೊಂಡಂತೆ ಕಾಣುತ್ತಿದೆ.

ಬಾಲಿವುಡ್‌ ಸ್ಟಾರ್‌ ಕಿಡ್ಸ್‌ ಆದ್ರೂ ಇವ್ರೆಲ್ಲಾ ಫ್ಲಾಪ್ ಆಗಿರೋ ನತದೃಷ್ಟರು; ಯಾರೆಲ್ಲಾ ಇದಾರೆ ನೋಡಿ..!

ತಮ್ಮ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮುಳುಗಿದ್ದಕ್ಕೆ ಕಾರಣವನ್ನು ಅವರು ಆಗಿನ ಸರಕಾರದ ಮೇಲೆ ಎತ್ತಿ ಹಾಕಿದ್ದಾರೆ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಗಾತ್ರ ಕಡಿತಗೊಳಿಸಿ ಖರ್ಚುವೆಚ್ಚ ಇಳಿಸಲುಮುಂದಾಗಿದ್ದೆ. ಇದನ್ನು ಆಗಿನ ವಿತ್ತ ಸಚಿವ ಪ್ರಣಬ್‌ ಮುಖರ್ಜಿ ಅವರನ್ನು ವಿನಂತಿಸಿದ್ದೆ. ಆದರೆ ಅವರು ಅದಕ್ಕೆ ಅವಕಾಶ ಕೊಡಲಿಲ್ಲ. ಅಲ್ಲಿಂದ ನಷ್ಟ ಆರಂಭವಾಯಿತು ಎಂದಿದ್ದಾರೆ. "ನಿಮ್ಮ ಸಂಸ್ಥೆಯ ವಿದೇಶಿ ನೌಕರರಿಗೆ ಸಾಕಷ್ಟು ಸಂಬಳ ಕೊಡ್ತೀರಿ, ಭಾರತೀಯ ಸಿಬ್ಬಂದಿಗೆ ಕೊಡ್ತಿಲ್ಲ ಯಾಕೆ?ʼʼ ಅಂದರೆ "ನನ್ನ ಭಾರತದ ಕಂಪನಿಯಲ್ಲಿ ಹಣವಿಲ್ಲʼʼ ಎಂದಿದ್ದಾರೆ. "ನನ್ನ 200 ಕೋಟಿ ರೂ. ಸೀಜ್‌ ಮಾಡಲಾಗಿದೆ. ಅದು ಕರ್ನಾಟಕ ಸರಕಾರದ ಬಳಿ ಇದೆ. ನಾನು ಕಿಂಗ್‌ಫೀಶರ್‌ ನಷ್ಟಕ್ಕೆ ಸಾರ್ವಜನಿಕವಾಗಿ ಸಾರಿ ಕೇಳಿದ್ದೇನೆ. ನಂಗೆ ಭಾರತಕ್ಕೆ ಮರಳುವ ಆಸೆ ಇದೆ. ಆದರೆ ಜೈಲಿಗೆ ಹೋಗುವ ಭಯ ಇದೆ...ʼʼ ಎಂದೆಲ್ಲ ಮಲ್ಯ ಹೇಳಿದ್ದಾರೆ. ಆಸಕ್ತರು ಹೆಚ್ಚು ವಿವರವಾದ ಅವರ ಸಂದರ್ಶನವನ್ನು ರಾಜ್‌ ಶಮಾನಿ ಪಾಡ್‌ಕ್ಯಾಸ್ಟ್‌ನಲ್ಲಿ ನೋಡಬಹುದು.

ಪ್ರಭಾಸ್‌ ಮತ್ತೊಂದು ಚಿತ್ರದಿಂದಲೂ ದೀಪಿಕಾ ಪಡುಕೋಣೆ ಔಟ್? ಹರಿದಾಡುತ್ತಿರುವ ಸುದ್ದಿ ನಿಜವೇ..?